ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರನ್ನು ಹೈಕಮಾಂಡ್ ಈಗಾಗಲೇ ಪ್ರಪೋಸ್ ಮಾಡಿರುವ ಕಾರಣ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಲ್ಲಿ ಯಾವುದೇ ಸ್ಪರ್ಧೆ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್ ಅವರೇ ನಾಯಕನಾಗಿ ಆಯ್ಕೆಯಾಗುತ್ತಾರೆ. ಇದರಲ್ಲಿ ಗೊಂದಲವಿಲ್ಲ. ಇದು ಕೇವಲ ರಾಜ್ಯಪಾಲರಿಗೆ ಮಾಹಿತಿ ನೀಡುವ ಔಪಚಾರಿಕ ಸಭೆಯಾಗಿದೆ ಎಂದರು.
ಮಂತ್ರಿಮಂಡಲದಲ್ಲಿ ಉಪಮುಖ್ಯಮಂತ್ರಿ ಸ್ಥಾನಗಳ ಕುರಿತ ಚರ್ಚೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, ಡಿಸಿಎಂ ಹುದ್ದೆ ಅನಗತ್ಯ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಡಿಸಿಎಂ ಹುದ್ದೆಯೇ ಬೇಡ. ಇದು ಸಾಂವಿಧಾನಿಕ ಅಥವಾ ಪದವಿಯ ಹುದ್ದೆಯಲ್ಲ, ಹಾಗೂ ಅಂತಹ ಹುದ್ದೆಗಳನ್ನು ಸೃಷ್ಟಿಸಿದರೆ ಇತರ ಸಮುದಾಯಗಳಿಂದ ಬೇಡಿಕೆಗಳು ಹೆಚ್ಚಾಗುತ್ತವೆ ಎಂದರು.
ಸಚಿವ ಸ್ಥಾನದ ವಿಚಾರವಾಗಿ ತಮ್ಮ ಹಿರಿತನಕ್ಕೆ ತಕ್ಕಂತೆ ಖಾತೆ ನೀಡಬಹುದು ಎಂದುಕೊಂಡಿದ್ದೇನೆ. ಯಾವುದೇ ಖಾತೆಗಾಗಿ ಲಾಬಿ ಮಾಡುವುದಿಲ್ಲ ಎಂದು ತಿಳಿಸಿದರು. ಪ್ರಸ್ತುತ ಮತ್ತು ಭವಿಷ್ಯದ ಸಚಿವ ಸಂಪುಟದಲ್ಲಿ ಯಾವ ಖಾತೆ ನೀಡಿದರೂ ಸಮರ್ಥವಾಗಿ ನಿರ್ವಹಿಸುವ ವಿಶ್ವಾಸ ನನಗಿದೆ ಎಂದರು.

