ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಿದೆ. ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಹಾಗೂ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಯೊಂದಕ್ಕೆ ರಾಮಕೃಷ್ಣ ಹೆಗಡೆ ಅವರ ಹೆಸರಿಡಲು ತೀರ್ಮಾನಿಸಲಾಗಿದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರೊಂದಿಗೆ ಅವರು ಉದ್ಘಾಟಿಸಿ, ಮಾತನಾಡಿದರು.
ಅಲ್ಲದೆ, ಗ್ರಾಮೀಣ ಆಡಳಿತಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲು ಹಾಗೂ ಅವರ ಪಂಚಾಯತ್ ರಾಜ್ ಪರಿಕಲ್ಪನೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ, ಪ್ರತಿ ವರ್ಷ ಅವರ ಜನ್ಮದಿನದಂದು ಅತ್ಯುತ್ತಮ ಪಂಚಾಯತ್‌ಗೆ ‘ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯಿತಿ ಪ್ರಶಸ್ತಿ’ ನೀಡುವ ಕಾರ್ಯಕ್ರಮವನ್ನು ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಆರ್.ಡಿ.ಪಿ.ಆರ್. ಇಲಾಖೆಗೆ ಸೂಚಿಸಲಾಗಿದೆ ಎಂದರು.
ರಾಮಕೃಷ್ಣ ಹೆಗಡೆ ಅವರು ಕೇವಲ ಅಧಿಕಾರ ನಡೆಸಿದ ನಾಯಕರಲ್ಲ; ಅವರು ಹಿಂಬಾಲಕರನ್ನು ಸೃಷ್ಟಿಸದೆ, ಪಂಚಾಯತ್‌ನಿಂದ ಸಂಸತ್ತಿನವರೆಗೆ ಹೊಸ ನಾಯಕರನ್ನು ಸೃಷ್ಟಿಸಿದರು. ಇಲ್ಲಿ ಕುಳಿತಿರುವ ನೂರಾರು ನಾಯಕರು ಅದಕ್ಕೆ ಸಾಕ್ಷಿ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕದ ಪ್ರಯೋಗಗಳು ದೇಶಕ್ಕೆ ಮಾದರಿಯಾಗಿದ್ದವು. ನಂತರ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳಿಗೆ ಈ ಚಿಂತನೆಯೇ ಪ್ರೇರಣೆಯಾಯಿತು ಎಂದರು.
ಅವರು ಜಾತಿ ಆಧಾರಿತ ರಾಜಕಾರಣಕ್ಕೆ ಸೀಮಿತವಾಗದೆ, ಮೌಲ್ಯಾಧಾರಿತ ರಾಜಕಾರಣ ಮತ್ತು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ್ದರು. ಅಧಿಕಾರವನ್ನು ಶಕ್ತಿಯ ಸಂಕೇತವಾಗಿ ಅಲ್ಲ, ಜನಸೇವೆಗೆ ದೊರೆತ ಅವಕಾಶವಾಗಿ ನೋಡಬೇಕು ಎಂಬ ಸಂದೇಶವನ್ನು ನೀಡಿದ್ದರು. ಅವರ ಬದುಕು ಒಂದು ಡಿಕ್ಷನರಿಯಿದ್ದಂತೆ; ಅವರ ಆಚಾರ-ವಿಚಾರಗಳಿಂದ ನಾವು ಅನೇಕ ವಿಷಯಗಳನ್ನು ಕಲಿಯಬಹುದು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ವಿಸ್ತರಣೆಗೆ ಹೆಗಡೆ ಅವರ ನೀತಿಗಳು ಸಹಕಾರಿಯಾದವು. ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೂ ಅವರ ಕಾಲದ ನೀತಿಗಳು ದಾರಿ ಮಾಡಿಕೊಟ್ಟವು. ಅದರ ಪರಿಣಾಮವಾಗಿ ಇಂದು ಕರ್ನಾಟಕವು ಈ ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರು.
ನಮ್ಮ ಸರ್ಕಾರವು ರಾಮಕೃಷ್ಣ ಹೆಗಡೆ ಅವರ ಮೌಲ್ಯಾಧಾರಿತ ರಾಜಕಾರಣ ಮತ್ತು ಅಭಿವೃದ್ಧಿ ಚಿಂತನೆಗಳನ್ನು ಮುಂದುವರಿಸಿಕೊಂಡು ಹೋಗಲಿದೆ. ಸಿದ್ದರಾಮಯ್ಯ, ದೇಶಪಾಂಡೆ, ರಾಯರೆಡ್ಡಿ, ಬಿ.ಎಲ್. ಶಂಕರ್ ಸೇರಿದಂತೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಮುಂದೆಯೂ ಅವರ ಆದರ್ಶ ಬದುಕಿನ ಆಚಾರ–ವಿಚಾರಗಳನ್ನು ಪಾಲಿಸಿಕೊಂಡು ಸಾಗುತ್ತೇವೆ ಎಂದು ತಿಳಿಸಿದ್ದಾರೆ.

