ನವದೆಹಲಿ: ದೆಹಲಿಯ ಮಾಜಿ ಮುಖ್ಯ ಕಾರ್ಯದರ್ಶಿ ರಾಕೇಶ್ ಮೆಹ್ತಾ ಅವರು ನೋಯ್ಡಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಸೆಪ್ಟೆಂಬರ್ 6ರಂದು ನೋಯ್ಡಾದ ಸೆಕ್ಟರ್ 82ರಲ್ಲಿರುವ ಸೆಂಟ್ರಲ್ ವಿಹಾರ್-2 ವಸತಿ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಅವರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಾಹಿತಿ ತಿಳಿದ ತಕ್ಷಣ ಫೇಸ್-2 ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿ ಆತ್ಮಹತ್ಯೆ ಪತ್ರವೂ ಪತ್ತೆಯಾಗಿದ್ದು, ಅದರಲ್ಲಿ ಮಾನಸಿಕ ಹಾಗೂ ಆರೋಗ್ಯ ಸಮಸ್ಯೆಗಳ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡೆತ್‌ನೋಟ್ ಸೇರಿದಂತೆ ಸ್ಥಳದಲ್ಲಿ ಸಿಕ್ಕಿರುವ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಮೆಹ್ತಾ ಅವರ ಪತ್ನಿ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಅವರು ತಮ್ಮ ಮಗನನ್ನು ಭೇಟಿಯಾಗಲು ಡೆಹ್ರಾಡೂನ್‌ಗೆ ತೆರಳಿದ್ದರು. ಪತಿಗೆ ಹಲವು ಬಾರಿ ಕರೆ ಮಾಡಿದರೂ ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಲೋಧಿ ರಸ್ತೆ ಶ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.
ಯಾರು ರಾಕೇಶ್ ಮೆಹ್ತಾ?
ರಾಕೇಶ್ ಮೆಹ್ತಾ ಅವರು 1975ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದರು. ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಆಡಳಿತಾವಧಿಯಲ್ಲಿ ಅವರು ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
2007ರಲ್ಲಿ ದೆಹಲಿಯ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಅವರು, 2010ರ ನವೆಂಬರ್‌ವರೆಗೆ ಈ ಹುದ್ದೆಯಲ್ಲಿದ್ದರು. ಅವರ ಅಧಿಕಾರಾವಧಿಯಲ್ಲೇ 2010ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ದೆಹಲಿಯಲ್ಲಿ ಆಯೋಜಿಸಲಾಗಿತ್ತು.
ದೆಹಲಿಯ ಸಾರಿಗೆ, ವಿದ್ಯುತ್ ಮತ್ತು ನಾಗರಿಕ ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳ ಅನುಷ್ಠಾನದಲ್ಲೂ ಅವರು ಕೆಲಸ ಮಾಡಿದ್ದರು. ದೆಹಲಿ ಮಹಾನಗರ ಪಾಲಿಕೆ (MCD) ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು.
ಮೆಹ್ತಾ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಎಂಎಸ್ಸಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಎಂಎ ಹಾಗೂ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಬಿಎ (ಆನರ್ಸ್) ಪದವಿ ಪಡೆದಿದ್ದರು.

