ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ಈಗ ನೇರವಾಗಿ ಕನ್ನಡಿಗರ ಆರಾಧ್ಯ ದೈವ ಡಾ. ರಾಜ್ಕುಮಾರ್ ಅವರ ಸ್ಮಾರಕದ ಬಗ್ಗೆಯೇ ಪ್ರಶ್ನೆ ಎತ್ತಿದ್ದಾರೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಸ್ಮಾರಕಕ್ಕೆ ನೀಡಿರುವ ಜಾಗದ ಬಗ್ಗೆ ಚೇತನ್ ಮಾಡಿರುವ ಟ್ವೀಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.
ಟ್ವೀಟ್ನಲ್ಲಿ ಚೇತನ್ ಹೇಳಿದ್ದೇನು?
ನಟ ಚೇತನ್ ತಮ್ಮ ಅಧಿಕೃತ ‘X’ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ:
ನಾವು ರಾಜ್ಕುಮಾರ್ ಅವರನ್ನು ಒಬ್ಬ ಶ್ರೇಷ್ಠ ಕಲಾವಿದ ಎಂದು ಗೌರವಿಸುತ್ತೇವೆ. ಆದರೆ, 2006ರಲ್ಲಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಈ ನಟನ ಸ್ಮಾರಕ ಸಂಕೀರ್ಣಕ್ಕಾಗಿ 2.5 ಎಕರೆ ಭೂಮಿಯನ್ನು ನೀಡಿದ್ದು ಎಷ್ಟು ಸಮಂಜಸ? ಸರ್ಕಾರವು ಭೂಮಿಯನ್ನು ಮಂಜೂರು ಮಾಡುವಾಗ ಮತಗಳ ಮೇಲೆ ಕಣ್ಣಿಡುವ ಬದಲು, ದೂರದೃಷ್ಟಿ ಮತ್ತು ಸಾರ್ವಜನಿಕ ಉಪಯುಕ್ತತೆಯನ್ನು ಗಮನಿಸಬೇಕು. 21ನೇ ಶತಮಾನದ ಭಾರತದಲ್ಲಿ ಭೂಮಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿದೆ.”
ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಚೇತನ್
2.5 ಎಕರೆ ಜಾಗ ತುಂಬಾ ಕಡಿಮೆ
ಮಂಜು ಎಂಬ ಅಭಿಮಾನಿಯೊಬ್ಬರು ಚೇತನ್ ವಾದಕ್ಕೆ ತಕ್ಕ ಉತ್ತರ ನೀಡಿದ್ದು, ಡಾ. ರಾಜ್ಕುಮಾರ್ ಕೇವಲ ಒಬ್ಬ ಕಲಾವಿದರಲ್ಲ, ಅವರು ಇಡೀ ಕರ್ನಾಟಕದ ಧ್ವನಿ. ಅವರ ಪ್ರತಿಯೊಂದು ನಡವಳಿಕೆಯೂ ಜನರಿಗೆ ಸ್ಫೂರ್ತಿ. ಕರ್ನಾಟಕವನ್ನು ಒಗ್ಗೂಡಿಸಿದ ಅಂತಹ ಮಹಾನ್ ವ್ಯಕ್ತಿಗೆ 2.5 ಎಕರೆ ಭೂಮಿ ಎಂಬುದು ಬಹಳ ಕಡಿಮೆ. ಹಣಕ್ಕಾಗಿ ಮದ್ಯ, ತಂಬಾಕು ಪ್ರಚಾರ ಮಾಡುವ ಇಂದಿನ ನಟರಿಗಿಂತ ಅವರು ಕೋಟಿ ಪಟ್ಟು ಶ್ರೇಷ್ಠ ಎಂದು ಹೇಳಿದ್ದಾರೆ.
ಇನ್ನೊಬ್ಬ ನೆಟ್ಟಿಗ ಸುಮನ್ ಎಂಬುವವರು ಚೇತನ್ ಅವರ ವ್ಯಕ್ತಿತ್ವವನ್ನೇ ಪ್ರಶ್ನಿಸಿದ್ದಾರೆ. ಚೇತನ್ ಅವರೇ, ನೀವು ಕರ್ನಾಟಕದ ಮೂಲದವರು ಎಂದು ಹೇಳಿಕೊಳ್ಳಲು ನಮಗೆ ಸಂಕಟವಾಗುತ್ತಿದೆ. ಒಬ್ಬರು ಸಾಧನೆ ಮಾಡಿದ ಎತ್ತರಕ್ಕೆ ನಿಮ್ಮಿಂದ ತಲುಪಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತೀರಾ? ಈ ರೀತಿಯ ಮನಸ್ಥಿತಿ ನಿಮ್ಮ ಸ್ವಂತ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಘವೇಂದ್ರ ಬಿ.ಕೆ. ಎಂಬುವವರು ಚೇತನ್ ಬಳಸಿದ ಭಾಷೆಯ ಬಗ್ಗೆ ಕಿಡಿಕಾರಿದ್ದು ನಮ್ಮ ಹೆಮ್ಮೆಯ ಡಾ. ರಾಜ್ಕುಮಾರ್ ಅವರನ್ನು ಕೇವಲ ರಾಜ್ಕುಮಾರ್ ಎಂದು ಏಕವಚನದಲ್ಲಿ ಕರೆಯುವ ಮೂಲಕ ನಿಮ್ಮ ಸಂಸ್ಕಾರ ಏನೆಂದು ತೋರಿಸಿಕೊಟ್ಟಿದ್ದೀರಿ. ಅವರು ಈ ನಾಡಿಗೆ ಸಲ್ಲಿಸಿದ ಸೇವೆಗೆ ಅವರಿಗೆ ಏನು ಸಿಕ್ಕರೂ ಅದು ಕಡಿಮೆಯೇ. ಅನಗತ್ಯವಾಗಿ ಚರ್ಚೆ ಮಾಡಿ ವಿವಾದ ಸೃಷ್ಟಿಸಬೇಡಿ” ಎಂದು ವಾರ್ನಿಂಗ್ ನೀಡಿದ್ದಾರೆ.
ಮತ ಬ್ಯಾಂಕ್ ರಾಜಕಾರಣದ ಆರೋಪ
ಸರ್ಕಾರಗಳು ಕೇವಲ ವೋಟ್ ಬ್ಯಾಂಕ್ಗಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂಬ ಚೇತನ್ ಅವರ ಪರೋಕ್ಷ ಟೀಕೆ ಈಗ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಕೂಡ ಹಲವು ಆಚರಣೆ ಮತ್ತು ವ್ಯಕ್ತಿಗಳ ಬಗ್ಗೆ ಮಾತನಾಡಿದ್ದ ಚೇತನ್ ಈಗ ಅಣ್ಣಾವ್ರ ಸ್ಮಾರಕದ ವಿಷಯ ಕೈಗೆತ್ತಿಕೊಂಡಿರುವುದು ವಿವಾದವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಲಕ್ಷಣ ಕಾಣಿಸುತ್ತಿದೆ.

