ಸಿಲಿಕಾನ್ ಸಿಟಿಯಲ್ಲಿ ಡಿಜಿಟಲ್ ಪೇಮೆಂಟ್ ಹೆಸರಿನಲ್ಲಿ ವ್ಯಾಪಾರಿಗಳಿಗೆ ಪಂಗನಾಮ ಹಾಕುವ ಹೈಟೆಕ್ ಜಾಲವೊಂದು ಸಕ್ರಿಯವಾಗಿದೆ ರಾಜಾಜಿನಗರದ ಮೊಬೈಲ್ ಶಾಪ್ ಮಾಲೀಕರೊಬ್ಬರು ಈ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 76,000 ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಗ್ರಾಹಕನ ಸೋಗಿನಲ್ಲಿ ಬಂದ ಖದೀಮನೊಬ್ಬ, ನಕಲಿ ಪೇಮೆಂಟ್ ಸ್ಕ್ರೀನ್‌ಶಾಟ್ ತೋರಿಸಿ ಮಾಲೀಕರ ಕಣ್ಣಿಗೆ ಮಣ್ಣೆರಚಿದ್ದು, ದುಬಾರಿ ಮೊಬೈಲ್‌ಗಳೊಂದಿಗೆ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ.
ನಡೆದಿದ್ದೇನು?
ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿರುವ ಸಿದ್ಧರಾಜು ಅವರಿಗೆ ಸೇರಿದ ಕಲರ್ಸ್ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಫೆಬ್ರವರಿ 12 ರಂದು ಅಭಿಷೇಕ್ ಎಂಬ ಯುವಕ ಗ್ರಾಹಕನ ಸೋಗಿನಲ್ಲಿ ಅಂಗಡಿಗೆ ಬಂದಿದ್ದನು. ಎರಡು ದುಬಾರಿ ಬೆಲೆಯ ಮೊಬೈಲ್‌ಗಳನ್ನು ಆಯ್ಕೆ ಮಾಡಿದ ಆತ ಒಟ್ಟು 76,000 ರೂಪಾಯಿ ಬಿಲ್ ಪಾವತಿಸಲು ಆನ್‌ಲೈನ್ ಮೊರೆ ಹೋಗಿದ್ದಾನೆ.
ಹಣ ಪಾವತಿಸಿದಂತೆ ನಕಲಿ ಪೇಮೆಂಟ್ ಸ್ಕ್ರೀನ್‌ಶಾಟ್ ಸಿದ್ಧಪಡಿಸಿ ಮಾಲೀಕರಿಗೆ ತೋರಿಸಿ, ನಂಬಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಾಲೀಕರು ಅಕೌಂಟ್ ಚೆಕ್ ಮಾಡುವಷ್ಟರಲ್ಲಿ ಖತರ್ನಾಕ್ ಕಿರಾತಕ ಮೊಬೈಲ್ ಸಮೇತ ಪರಾರಿಯಾಗಿದ್ದ.
ಪೊಲೀಸ್ ತನಿಖೆ ಚುರುಕು
ಹಣ ಜಮೆಯಾಗದಿದ್ದಾಗ ಗಾಬರಿಗೊಂಡ ಸಿದ್ಧರಾಜು ಅವರು ತಕ್ಷಣ ಮಾಗಡಿ ರೋಡ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಎಚ್ಚರಿಕೆ:
ಕೇವಲ ಸ್ಕ್ರೀನ್‌ಶಾಟ್ ನಂಬಬೇಡಿ: ಗ್ರಾಹಕರು ತೋರಿಸುವ ಸ್ಕ್ರೀನ್‌ಶಾಟ್ ನಕಲಿ ಇರಬಹುದು. ಅದು ನಿಮ್ಮ ಗ್ಯಾಲರಿಯ ಫೋಟೋ ಕೂಡ ಆಗಿರಬಹುದು.
ಬ್ಯಾಂಕ್ ಮೆಸೇಜ್ ಪರಿಶೀಲಿಸಿ: ನಿಮ್ಮ ಮೊಬೈಲ್‌ಗೆ ಬ್ಯಾಂಕ್‌ನಿಂದ ಅಧಿಕೃತ ಹಣ ಜಮೆಯಾದ ಮೆಸೇಜ್ (SMS) ಬರುವವರೆಗೆ ಕಾಯಿರಿ.
ಸ್ಟೇಟ್‌ಮೆಂಟ್ ಚೆಕ್ ಮಾಡಿ: ಅನುಮಾನವಿದ್ದರೆ ತಕ್ಷಣ ನಿಮ್ಮ ಬ್ಯಾಂಕಿಂಗ್ ಆ್ಯಪ್ ಓಪನ್ ಮಾಡಿ ಟ್ರಾನ್ಸಾಕ್ಷನ್ ಹಿಸ್ಟರಿ(Transaction History) ಪರಿಶೀಲಿಸಿ.
ಧ್ವನಿ ಬಾಕ್ಸ್ (Sound Box) ಬಳಸಿ: ಪೇಮೆಂಟ್ ಆದ ತಕ್ಷಣ ಧ್ವನಿ ಮೂಲಕ ಖಚಿತಪಡಿಸುವ ಸೌಂಡ್ ಬಾಕ್ಸ್ ಅಳವಡಿಸಿಕೊಳ್ಳುವುದು ಉತ್ತಮ.

