ಧಾರವಾಡ: ರೈಲು ಬೋಗಿಯಲ್ಲಿ ಸೀಟ್ ಕೆಳಗಡೆ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಧಾರವಾಡಲ್ಲಿ ನಡೆದಿದೆ. ದುಷ್ಕರ್ಮಿಗಳು ಮಹಿಳೆಯನ್ನು ಕೊಲೆಗೈದು ರೈಲಿನ ಸೀಟ್ ಕೆಳಗೆ ಶವವಿಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸೊಲ್ಲಾಪುರದಿಂದ ಧಾರವಾಡಕ್ಕೆ ಆಗಮಿಸಿರುವ ರೈಲಿನಲ್ಲಿ ಈ ಘಟನೆ ನಡೆದಿದೆ. ಧಾರವಾಡ ರೈಲು ನಿಲ್ದಾಣದಲ್ಲಿ ರೈಲು ನಿಲ್ಲುತ್ತಿದ್ದಂತೆ ರೈಲನ್ನು ಕ್ಲೀನ್ ಮಾಡಲು ಸಿಬ್ಬಂದಿಗಳು ಮುಂದಾಗಿದ್ದಾರೆ. ಈ ವೇಳೆ ರೈಲಿನ ಬೋಗಿಯೊಳಗೆ ಸೋಟ್ ಕೆಳಗಡೆ ಮಹಿಳೆಯೊಬ್ಬರ ಕೈ ಮಾತ್ರ ಕಾಣುತ್ತಿತ್ತು.
ತಕ್ಷಣ ಸ್ವಚ್ಛತಾ ಸಿಬ್ಬಂದಿಗಳು ರೈಲಿನ ಸೀಟಿನ ಕೆಳಭಾಗದಲ್ಲಿ ಪರಿಶೀಲಿಸಿದಾಗ ಅರೆಬರೆ ಬಟ್ಟೆ ಸುತ್ತಿದ್ದ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮೃತದೇಹ ಕಂಡು ಸಿಬ್ಬಂದಿಗಳು ಗಾಬರಿಯಾಗಿದ್ದಾರೆ. ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು, ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಮಹಿಳೆಯನ್ನು ಕೊಲೆಗೈದು ರೈಲಿನ ಸೀಟ್ ಕೆಳಗೆ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.

