HomeIndiaಕನ್ಫರ್ಮ್ ಟಿಕೆಟ್ ಇದ್ದರೂ ಮಹಿಳೆಯನ್ನು ರೈಲಿನಿಂದ ಇಳಿಸಿ ಅರೆಸ್ಟ್ ; 2 ಲಕ್ಷ ರೂ. ಪರಿಹಾರ...

ಕನ್ಫರ್ಮ್ ಟಿಕೆಟ್ ಇದ್ದರೂ ಮಹಿಳೆಯನ್ನು ರೈಲಿನಿಂದ ಇಳಿಸಿ ಅರೆಸ್ಟ್ ; 2 ಲಕ್ಷ ರೂ. ಪರಿಹಾರ ನೀಡಲು ಮಾನವ ಹಕ್ಕುಗಳ ಆಯೋಗ ಆದೇಶ !

ಕೈಯಲ್ಲಿ ಅಧಿಕೃತ ರಿಸರ್ವೇಶನ್ ಟಿಕೆಟ್ ಇದ್ದರೂ, ರೈಲ್ವೆ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಮಧ್ಯರಾತ್ರಿ ಏಕಾಂಗಿ ಮಹಿಳೆಯನ್ನು ರೈಲಿನಿಂದ ಕೆಳಗಿಳಿಸಿ, ಟಿಕೆಟ್‌ ರಹಿತ ಪ್ರಯಾಣದ ಸುಳ್ಳು ಕೇಸ್ ಹಾಕಿ ಬಂಧಿಸಿದ್ದ ಆಘಾತಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಭಾರತೀಯ ರೈಲ್ವೆಗೆ ಕಪಾಳಮೋಕ್ಷ ಮಾಡಿದೆ. ಸಂತ್ರಸ್ತ ಮಹಿಳೆಗೆ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಯೋಗವು ರೈಲ್ವೆ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಕೇರಳ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಅಲೆಕ್ಸಾಂಡರ್ ಥಾಮಸ್ ಈ ಮಹತ್ವದ ಆದೇಶ ನೀಡಿದ್ದು, ಒಂದು ತಿಂಗಳೊಳಗೆ ಪರಿಹಾರ ಮೊತ್ತವನ್ನು ಪಾವತಿಸಬೇಕು. ತಪ್ಪಿದರೆ ಶೇ. 8ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲ, ತಪ್ಪಿತಸ್ಥ ಅಧಿಕಾರಿಗಳ ವೇತನದಿಂದಲೇ ಈ ಪರಿಹಾರ ಮೊತ್ತವನ್ನು ವಸೂಲಿ ಮಾಡಲು ದಕ್ಷಿಣ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ (DRM) ಅನುಮತಿ ನೀಡಲಾಗಿದೆ.

ಪ್ರಕರಣದ ಹಿನ್ನೆಲೆ: ಅಂದು ರಾತ್ರಿ ನಡೆದಿದ್ದೇನು?

ತ್ರಿಶೂರ್ ಮೂಲದ, ತಿರುವನಂತಪುರಂ ನಿವಾಸಿ ಕೆ. ಜಯಸ್ಮಿತಾ ಎಂಬ ಮಹಿಳೆ 2023ರ ಜುಲೈ 30ರಂದು ವಡಕ್ಕಂಚೇರಿಯಿಂದ ತಿರುವನಂತಪುರಂಗೆ ತೆರಳಲು ಮಂಗಳೂರು-ತಿರುವನಂತಪುರಂ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16348) ರೈಲಿನ S4 ಬೋಗಿಯಲ್ಲಿ 41ನೇ ನಂಬರ್ ಬರ್ತ್ ಅನ್ನು ಕಾಯ್ದಿರಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ರೈಲು ಹತ್ತಿ ತಮ್ಮ ಸೀಟಿನ ಬಳಿ ಹೋದಾಗ, ಆ ಬರ್ತ್‌ನಲ್ಲಿ ಬೇರೊಬ್ಬ ಪ್ರಯಾಣಿಕ ಕುಳಿತಿದ್ದರು. ಗಾಬರಿಗೊಂಡ ಜಯಸ್ಮಿತಾ ಅವರು ಟಿಟಿಇ (TTE) ಬಳಿ ವಿಚಾರಿಸಿದಾಗ, “ನಿಮ್ಮ ಟಿಕೆಟ್ ಆನ್‌ಲೈನ್‌ನಲ್ಲಿ ರದ್ದಾಗಿದೆ” ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ತಿರುವನಂತಪುರಂ ರೈಲ್ವೆ ನಿಲ್ದಾಣದ ಅಧಿಕೃತ ಕೌಂಟರ್‌ನಲ್ಲಿ ನೇರವಾಗಿ ನಗದು ಕೊಟ್ಟು ಖರೀದಿಸಿದ ಟಿಕೆಟ್, ತನ್ನ ಗಮನಕ್ಕೇ ಬಾರದೆ ಆನ್‌ಲೈನ್‌ನಲ್ಲಿ ಹೇಗೆ ರದ್ದಾಗಲು ಸಾಧ್ಯ ಎಂದು ಪ್ರಶ್ನಿಸಿದಾಗ ಟಿಟಿಇ ಸರಿಯಾಗಿ ಉತ್ತರಿಸಿಲ್ಲ.

₹500 ಲಂಚಕ್ಕೆ ಬೇಡಿಕೆ, ನಡುರಾತ್ರಿಯೇ ರೈಲಿನಿಂದ ನೂಕಾಟ:

ಮತ್ತೊಂದು ಸೀಟು ಬೇಕಿದ್ದರೆ ₹500 ದಂಡ ಕಟ್ಟುವಂತೆ ಟಿಟಿಇ ಮಹಿಳೆಗೆ ಒತ್ತಡ ಹೇರಿದ್ದಾರೆ. ಆದರೆ ಆಕೆಯ ಬಳಿ ಅಷ್ಟು ಹಣವಿರಲಿಲ್ಲ. ತಾನು ಏಕಾಂಗಿ ಮಹಿಳೆಯಾಗಿದ್ದು, ಮಧ್ಯರಾತ್ರಿ ಆಗಿರುವುದರಿಂದ ತನ್ನನ್ನು ರೈಲಿನಿಂದ ಇಳಿಸಬೇಡಿ ಎಂದು ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಕರುಣೆ ತೋರದ ಟಿಟಿಇ, ರೈಲು ಆಲುವಾ ನಿಲ್ದಾಣ ತಲುಪಿದಾಗ ಆಕೆಯನ್ನು ಬಲವಂತವಾಗಿ ಕೆಳಗಿಳಿಸಿ ರೈಲ್ವೆ ರಕ್ಷಣಾ ಪಡೆಗೆ (RPF) ಒಪ್ಪಿಸಿದ್ದಾರೆ.

ಆರ್‌ಪಿಎಫ್ ಸಿಬ್ಬಂದಿ ಆಕೆಯ ವಿರುದ್ಧ ಟಿಕೆಟ್‌ ರಹಿತ ಪ್ರಯಾಣದ ಕ್ರಿಮಿನಲ್ ಕೇಸ್ ದಾಖಲಿಸಿ, ಮಧ್ಯರಾತ್ರಿಯೇ ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ನಂತರ ತಮ್ಮದೇ ತಪ್ಪು ಎಂದು ಗೊತ್ತಾದ ಮೇಲೆ ರೈಲ್ವೆ ಇಲಾಖೆ ಆ ಕೇಸ್ ಅನ್ನು ಹಿಂಪಡೆದಿತ್ತು.

ರೈಲ್ವೆ ಕ್ಲರ್ಕ್ ಮಾಡಿದ ಆ ಒಂದು ಸಣ್ಣ ಪ್ರಮಾದವೇನು?

ನಂತರ ನಡೆದ ರೈಲ್ವೆ ಆಂತರಿಕ ತನಿಖೆಯಲ್ಲಿ ಸತ್ಯ ಬಯಲಿಗೆ ಬಂದಿದೆ. ಜಯಸ್ಮಿತಾ ಅವರು ರಿಸರ್ವೇಷನ್ ಫಾರ್ಮ್‌ನಲ್ಲಿ ಬರೆದಿದ್ದ ಮೊಬೈಲ್ ನಂಬರ್ ಅನ್ನು ಕೌಂಟರ್ ಬುಕಿಂಗ್ ಕ್ಲರ್ಕ್ ಕಂಪ್ಯೂಟರ್‌ಗೆ ಎಂಟ್ರಿ ಮಾಡುವಾಗ ಒಂದು ಡಿಜಿಟ್ (ಅಂಕೆ) ತಪ್ಪಾಗಿ ನಮೂದಿಸಿದ್ದರು!

ಪರಿಣಾಮವಾಗಿ, ಟಿಕೆಟ್ ಕನ್ಫರ್ಮ್ ಆದ ಮೆಸೇಜ್ ಬೇರೊಬ್ಬ ಅಪರಿಚಿತ ವ್ಯಕ್ತಿಯ ಮೊಬೈಲ್‌ಗೆ ಹೋಗಿದೆ. ಮೆಸೇಜ್ ಸ್ವೀಕರಿಸಿದ ಆ ಅಪರಿಚಿತ, “ನಾನು ಬುಕ್ ಮಾಡದ ಟಿಕೆಟ್ ನನಗೆ ಏಕೆ ಬಂದಿದೆ?” ಎಂದು ಭಾವಿಸಿ, ಆ ಮೆಸೇಜ್ ಆಧಾರದಲ್ಲಿ ಆನ್‌ಲೈನ್ ಮೂಲಕ ಆ ಟಿಕೆಟ್‌ ಅನ್ನು ರದ್ದು (Cancel) ಮಾಡಿದ್ದಾನೆ. ರೈಲ್ವೆ ಕ್ಲರ್ಕ್ ಮಾಡಿದ ಆ ಸಣ್ಣ ತಪ್ಪಿಗೆ ಜಯಸ್ಮಿತಾ ಅವರು ನಡುರಾತ್ರಿ ರಸ್ತೆಗೆ ಬೀಳುವಂತಾಯಿತು.

ಸರ್ಕಾರಿ ಕೆಲಸವೂ ಕಳೆದುಕೊಂಡ ಸಂತ್ರಸ್ತೆ:

ರೈಲ್ವೆ ಪೊಲೀಸರು ದಾಖಲಿಸಿದ ಸುಳ್ಳು ಕ್ರಿಮಿನಲ್ ಮೊಕದ್ದಮೆಯಿಂದಾಗಿ ಜಯಸ್ಮಿತಾ ಅವರು ತಾವು ಮಾಡುತ್ತಿದ್ದ ಸರ್ಕಾರಿ ಗುತ್ತಿಗೆ ನೌಕರಿಯನ್ನೂ ಕಳೆದುಕೊಳ್ಳಬೇಕಾಯಿತು. ಸಂವಿಧಾನ ನೀಡಿರುವ ಗೌರವಯುತವಾಗಿ ಜೀವಿಸುವ ಹಕ್ಕನ್ನು ರೈಲ್ವೆ ಅಧಿಕಾರಿಗಳು ತುಳಿದಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಉದ್ಯೋಗ ಕಳೆದುಕೊಂಡಿರುವುದಕ್ಕೆ ಪರಿಹಾರ ಒದಗಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಸೂಚಿಸಿರುವ ಆಯೋಗ, ಒಂದು ತಿಂಗಳೊಳಗೆ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಆದೇಶಿಸಿದೆ.

ಆಯೋಗದ ಕಟ್ಟುನಿಟ್ಟಿನ ನಿರ್ದೇಶನಗಳು:

  • ಸಂತ್ರಸ್ತ ಮಹಿಳೆಗೆ ನಿಗದಿತ ಅವಧಿಯಲ್ಲಿ ₹2 ಲಕ್ಷ ಪರಿಹಾರ ತಲುಪಬೇಕು. ವಿಳಂಬವಾದರೆ ಶೇ. 8ರ ಬಡ್ಡಿ ಪಾವತಿಸಬೇಕು.

  • ಮಧ್ಯರಾತ್ರಿ ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು ರೈಲ್ವೆಯ ಜವಾಬ್ದಾರಿ.

  • ರೈಲ್ವೆ ಕಾಯ್ದೆಯ ಸೆಕ್ಷನ್ 137 ಮತ್ತು 139ರ ಕಟ್ಟುನಿಟ್ಟಿನ ಪಾಲನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ತಕ್ಷಣವೇ ಆಂತರಿಕ ಸುತ್ತೋಲೆ ಹೊರಡಿಸಬೇಕು. ಯಾವುದೇ ಕಾರಣಕ್ಕೂ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಬಾರದು ಎಂದು ಆಯೋಗ ತಾಕೀತು ಮಾಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular