ರಾಯಚೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡಿರುವ ಖದೀಮರು ಏನೆಲ್ಲ ವೇಷ ಹಾಕಿ ಕೈಚಳಕ ತೋರುತ್ತಾಅರೆ ನೋಡಿ. ಸಾದು-ಸಂತರ ವೇಷದಲ್ಲಿ ಬಂದು ಕಳ್ಳರ ಗ್ಯಾಂಗ್ ವೊಂದು ಅಂಗಡಿ ಮಾಲೀಕನಿಗೆ ಪ್ರಸಾದದ ರೀತಿಯ ಪೊಟ್ಟಣ ಕೊಟ್ಟು, ಹೂವಿನ ವಾಸನೆ ತೋರಿಸಿ ಹಣ ದೋಚಿ ಪರಾರಿಯಾಗಿರುವ ಘಟನೆ ರಾಯಚೂರುನಲ್ಲಿ ನಡೆದಿಇದೆ.
ರಾಯಚೂರಿನ ಸಿಂಧನೂರು ನಗರದಲ್ಲಿ ಈ ಘಟನೆ ನಡೆದಿದೆ. ನಗರದಲ್ಲಿ ಸಾಧು ಸಂತರ ಸೋಗಿನಲ್ಲಿ ಬಂದು, ಹೂವುಗಳನ್ನು ನೀಡಿ, ಸಮ್ಮೋಹನ ಮಾಡುವ ಮೂಲಕ ಸಾರ್ವಜನಿಕರ ಹಣ ಮತ್ತು ಚಿನ್ನಾಭರಣಗಳನ್ನು ದೋಚುತ್ತಿರುವ ಗ್ಯಾಂಗ್ ನ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿದೆ.
ಸಿಂಧನೂರು ನಗರದ ‘ಸಾಯಿ ಮೆಡಿಕಲ್ಸ್’ ಫಾರ್ಮಸಿಗೆ ಸಾಧುವೊಬ್ಬರು ಬಂದಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದು ಕುಡಿಯಲು ನೀರು ಕೇಳಿದ್ದಾರೆ. ಮೆಡಿಕಲ್ ಅಂಗಡಿಯ ಮಾಲೀಕರಾದ ವಿಷ್ಣುದತ್ತು ಮಾನವೀಯತೆ ಮತ್ತು ಸಾಧುಗಳ ಮೇಲಿನ ಭಕ್ತಿಯಿಂದ ತಕ್ಷಣವೇ ಫ್ರಿಡ್ಜ್‌ನಿಂದ ತಣ್ಣನೆಯ ನೀರನ್ನು ತಂದುಕೊಟ್ಟು ಸತ್ಕರಿಸಿದ್ದಾರೆ. ನೀರು ಕುಡಿದ ಸಾಧು, ಮಾಲೀಕರ ಭಕ್ತಿಗೆ ಮೆಚ್ಚುಗೆ ಸೂಚಿಸುವಂತೆ ನಟಿಸಿದ್ದಾನೆ. ನಿನಗೆ ಮತ್ತು ನಿನ್ನ ಮಕ್ಕಳಿಗೆ ಒಳಿತಾಗಲಿದೆ. ನಿಮ್ಮ ಸಂಕಷ್ಟಗಳೆಲ್ಲವೂ ದೂರಾಗಲಿವೆ ಎಂದು ಹರಸುತ್ತಾ ತನ್ನ ಕೈಯಲ್ಲಿದ್ದ ಪೊಟ್ಟಣ ಕೊಟ್ಟು, ಎರಡು ಹೂವುಗಳನ್ನು ವಿಷ್ಣುದತ್ತು ಅವರ ಕೈಗೆ ನೀಡಿದ್ದಾನೆ.
ಸಾಧು ನೀಡಿದ ಎರಡು ಹೂವುಗಳ ವಾಸನೆ ತಗುಲಿದ ಕೆಲವೇ ಕ್ಷಣಗಳಲ್ಲಿ ಮಾಲೀಕನಿಗೆ ಮಂಕು ಬಡಿದಂತಾಗಿದೆ. ತಮಗೆ ಅರಿವಿಲ್ಲದಂತೆಯೇ ಸಮ್ಮೋಹನಕ್ಕೆ ಒಳಗಾದ ಮಾಲೀಕ, ಖುದ್ದು ತಾವೇ ತಮ್ಮ ಜೇಬಿನಲ್ಲಿದ್ದ 10 ಸಾವಿರ ರೂಪಾಯಿ ನಗದು ಹಣ ಮತ್ತು ಕೈಯಲ್ಲಿದ್ದ ಬೆಲೆಬಾಳುವ ಬಂಗಾರದ ಉಂಗುರವನ್ನು ಬಿಚ್ಚಿ ಖದೀಮ ಸಾಧುವಿನ ಕೈಗೆ ಕೊಟ್ಟಿದ್ದಾರೆ. ಹಣ ಮತ್ತು ಚಿನ್ನವನ್ನು ಲೂಟಿ ಮಾಡಿದ ಸಾಧು, ಅಲ್ಲಿಂದ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾನೆ.
ಕೆಲ ಹೊತ್ತಿನ ಬಳಿಕ ವಿಷ್ಣುದತ್ತು ಅವರು ಸಂಪೂರ್ಣ ಪ್ರಜ್ಞಾವಸ್ಥೆಗೆ ಬಂದಾಗ ತಮಗೆ ವಂಚನೆಯಾಗಿರುವುದು ಅರಿವಾಗಿದೆ.
ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಸಾಯಿ ಮೆಡಿಕಲ್ಸ್ ಹಾಗೂ ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಸಾಧುಗಳ ಸೋಗಿನಲ್ಲಿರುವ ಖದೀಮರ ತಂಡ ನಗರದಾದ್ಯಂತ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಪತ್ತೆಯಾಗಿದೆ. ಸದ್ಯ ಆರೋಪಿಗಳ ಪತ್ತೆಗಾಗಿ ಹಾಗೂ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

