ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಧಗಧಗಿಸುತ್ತಿರುವ ಲೀಡರ್‌ಶಿಪ್ ಬದಲಾವಣೆ ಬಿಕ್ಕಟ್ಟು ಇದೀಗ ರಾಷ್ಟ್ರ ರಾಜಕಾರಣದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್ ಮುಂದಾಗಿದೆ ಎಂಬ ವದಂತಿಗಳ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
“ಒಂದು ವೇಳೆ ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗದ (OBC) ಪ್ರಭಾವಿ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದರೆ, ಅವರು ಎಂದಿಗೂ ಓಬಿಸಿ ಪರವಾಗಿಲ್ಲ ಎಂಬುದು ಸಾಬೀತಾಗಲಿದೆ” ಎಂದು ಬೊಮ್ಮಾಯಿ ಎಚ್ಚರಿಸಿದ್ದಾರೆ.
ಇಂಡಿ (INDI) ಮೈತ್ರಿಕೂಟಕ್ಕೆ ಬಿಗ್ ಶಾಕ್ ಗ್ಯಾರಂಟಿ
ಈ ಕುರಿತು ಎಎನ್‌ಐ (ANI) ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಬಸವರಾಜ ಬೊಮ್ಮಾಯಿ, ಕರ್ನಾಟಕದ ನಾಯಕತ್ವ ಬದಲಾವಣೆಯ ನಿರ್ಧಾರವು ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗುವುದಿಲ್ಲ, ಇದು ರಾಷ್ಟ್ರ ಮಟ್ಟದ ‘ಇಂಡಿ ಮೈತ್ರಿಕೂಟ’ದ (INDI Alliance) ಮೇಲೂ ಭಾರಿ ದೊಡ್ಡ ಪರಿಣಾಮ ಬೀರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಓಬಿಸಿ ನಾಯಕರ ಆಕ್ರೋಶ: “ರಾಹುಲ್ ಗಾಂಧಿ ಅವರ ಈ ನಿರ್ಧಾರವನ್ನು ಇಂಡಿ ಮೈತ್ರಿಕೂಟದಲ್ಲಿರುವ ಇತರ ಓಬಿಸಿ ನಾಯಕರು ಯಾವುದೇ ಕಾರಣಕ್ಕೂ ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ಇದು ಮೈತ್ರಿಕೂಟದ ಒಳಗಡೆ ದೊಡ್ಡ ಮಟ್ಟದ ಅಸಮಾಧಾನಕ್ಕೆ ಕಾರಣವಾಗಲಿದೆ” ಎಂದು ಬೊಮ್ಮಾಯಿ ಹೇಳಿದ್ದಾರೆ.
ದಲಿತ ಮತ್ತು ಓಬಿಸಿ ಕಾರ್ಡ್ ಮುನ್ನೆಲೆಗೆ
ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನಕ್ಕಾಗಿ ತೀವ್ರ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿರುವ ಬೆನ್ನಲ್ಲೇ, ಸಿದ್ದರಾಮಯ್ಯ ಬಣವು ದಲಿತ ಸಿಎಂ ಅಥವಾ ಓಬಿಸಿ ನಾಯಕತ್ವದ ಅಸ್ತ್ರವನ್ನು ಮುನ್ನೆಲೆಗೆ ತರುತ್ತಿದೆ. ಸದ್ಯ ಸಿದ್ದರಾಮಯ್ಯ ಅವರ ಪರವಾಗಿ ಅಹಿಂದ ವರ್ಗದ ದೊಡ್ಡ ಬೆಂಬಲ ಇರುವುದರಿಂದ, ಅವರನ್ನು ದಿಢೀರ್ ಆಗಿ ಹೈಕಮಾಂಡ್ ಕೆಳಗಿಳಿಸಿದರೆ ಹಿಂದುಳಿದ ವರ್ಗಗಳ ಮತಬ್ಯಾಂಕ್ ಕಾಂಗ್ರೆಸ್ ಕೈತಪ್ಪುವ ಆತಂಕ ಎದುರಾಗಿದೆ.
ಇದೇ ಅಂಶವನ್ನು ಇಟ್ಟುಕೊಂಡು ಈಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ನೇರ ಟಾಂಗ್ ನೀಡಿದ್ದು, ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಕೈ ಪಾಳಯಕ್ಕೆ ರಾಷ್ಟ್ರ ಮಟ್ಟದಲ್ಲಿ ತಿರುಗುಬಾಣವಾಗಲಿದೆ ಎಂದು ಲೇವಡಿ ಮಾಡಿದ್ದಾರೆ.

