ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಟ ಆದಿತ್ಯ ಶಶಿಕುಮಾರ್ ಮತ್ತು ಸಮೀಕ್ಷಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ರಾಶಿ’ ಸಿನಿಮಾದಿಂದ ಹೊಸ ಸಿಹಿ ಸುದ್ದಿ ಹೊರಬಿದ್ದಿದೆ. ಈ ಚಿತ್ರದ ‘ಮೊದಲ ಪ್ರೀತಿ’ ಎಂಬ ಪ್ರಣಯ ಗೀತೆಯ ವೀಡಿಯೋ ಹಾಡು ಇದೀಗ ಯೂಟ್ಯೂಬ್ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಈ ಮಧುರವಾದ ಪ್ರೇಮಗೀತೆಗೆ ಪ್ರಸಿದ್ಧ ಗಾಯಕ ಅರ್ಮಾನ್ ಮಲಿಕ್ ಧ್ವನಿಯಾಗಿದ್ದು, ತಮ್ಮ ಶಾರೀರದಿಂದ ಹಾಡಿಗೆ ಮತ್ತಷ್ಟು ಮೆರುಗು ನೀಡಿದ್ದಾರೆ. ನವೀನ ಶೈಲಿಯ ಈ ಹಾಡಿನಲ್ಲಿ ನಾಯಕ-ನಾಯಕಿಯ ರೊಮ್ಯಾಂಟಿಕ್ ಕೆಮಿಸ್ಟ್ರಿ ಗಮನ ಸೆಳೆಯುತ್ತಿದೆ. ‘ಧುವನ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಅಖಿಲೇಶ್ ಎಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ವಿಜಯ್ ಪಾಳೇಗಾರ್ ಅವರ ನಿರ್ದೇಶನದಲ್ಲೇ ಈ ಹಾಡು ಮೂಡಿಬಂದಿದೆ. ವಿಶೇಷವೆಂದರೆ ವಿಜಯ್ ಪಾಳೇಗಾರ್ ಅವರೇ ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತವನ್ನೂ ಸಂಯೋಜಿಸಿದ್ದಾರೆ.
ಈ ವೀಡಿಯೋ ಹಾಡಿನಲ್ಲಿ ನೃತ್ಯ ನಿರ್ದೇಶಕ ಭೂಷಣ್ ಅವರ ಕೊರಿಯೋಗ್ರಫಿ ಮೂಡಿಬಂದಿದ್ದು, ನವೀನ್ ಸೂರ್ಯ ಅವರ ಛಾಯಾಗ್ರಹಣ ಹಾಡಿನ ದೃಶ್ಯ ವೈಭವವನ್ನು ಹೆಚ್ಚಿಸಿದೆ. ಕೆ ಎಂ ಪ್ರಕಾಶ್ ಅವರ ಸಂಕಲನ ಹಾಗೂ ಮಹೇಶ್ ಸತಾನೂರು ಅವರ ಕಲಾ ನಿರ್ದೇಶನ ಈ ಹಾಡಿನಲ್ಲಿದೆ.
ಚಿತ್ರದಲ್ಲಿ ರಮೇಶ್ ಇಂದಿರಾ, ತಬಲಾ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಹುಲಿ ಕಾರ್ತಿಕ್, ವಿನೋದ್ ಗೊಬ್ರಗಾಲ, ಉಗ್ರಂ ರವಿ, ಕರಿ ಸುಬ್ಬು, ವರ್ಧನ್ ತೀರ್ಥಹಳ್ಳಿ ಹಾಗೂ ಭಜರಂಗಿ ಪ್ರಸನ್ನ ಅವರನ್ನೊಳಗೊಂಡ ದೊಡ್ಡ ತಾರಾಗಣವಿದೆ. ಯೂಟ್ಯೂಬ್ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಈ ‘ಮೊದಲ ಪ್ರೀತಿ’ ಹಾಡು ಪ್ರೇಮಿಗಳ ನೆಚ್ಚಿನ ಗೀತೆಯಾಗಿ ಹೊರಹೊಮ್ಮುತ್ತಿದೆ.

