ಬೆಂಗಳೂರು: ರಾಜ್ಯಸಭಾ ಟಿಕೆಟ್ ವಿಚಾರವಾಗಿ ಮಾತನಾಡಿದ್ದ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ, ಮಂಡ್ಯ ಮೇಡಂಗೂ ಟೋಪಿ ಹಾಕಿದ್ದಾರೆ. ಅವರಿಗಾದರೂ ಟಿಕೆಟ್ ಕೊಟ್ಟಿದ್ದರೆ ನಾವೇನು ಬೇಡ ಅಂತಿದ್ವಾ? ಎಂದು ಹೇಳಿದ್ದರು. ಇದೇ ವಿಚಾರವಾಗಿ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಗರಂ ಆಗಿದ್ದಾರೆ.
ರೇವಣ್ಣ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದ್ದಂತೆ ಮಾತನಾಡಿರುವ ಆರ್.ಅಶೋಕ್, ಅದು ನಮ್ಮ ಪಕ್ಷದ ಆಂತರಿಕ ವಿಚಾರ. ರೇವಣ್ಣ ಆಗಲಿ, ಇನ್ನೊಬ್ಬರಾಗಲಿ ಮಾತನಾಡುವ ಅಧಿಕಾರವಿಲ್ಲ. ಯಾರಿಗೂ ಈ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ಎಂದು ಗುಡುಗಿದ್ದಾರೆ.
ಬಿಜೆಪಿ ಯಾರಿಗೂ ರಾಜ್ಯಸಭಾ ಟಿಕೆಟ್ ಭರವಸೆ ನೀಡಿರಲಿಲ್ಲ. ಪಕ್ಷದ ನಿಯಮಾನುಸಾರ, ನಾವು ನಮ್ಮ ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ರಾಜ್ಯಸಭಾ ಟಿಕೆಟ್ ನೀಡಿದ್ದೇವೆ. ಈ ನಿರ್ಧಾರ ಸಂಪೂರ್ಣವಾಗಿ ನಮ್ಮ ಪಕ್ಷದ ಆಂತರಿಕ ಪ್ರಕ್ರಿಯೆಯ ಭಾಗವಾಗಿದೆ ಎಂದು ತಿಳಿಸಿದ್ದಾರೆ.
ರೇವಣ್ಣ ಅವರು ಈ ಕುರಿತು ಅನಗತ್ಯವಾಗಿ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಬಾರದು. ನಮ್ಮ ಪಕ್ಷದ ಆಂತರಿಕ ವಿಚಾರವನ್ನು ಹೊರಗಿನವರು ಚರ್ಚಿಸುವುದು ಬೇಡ ಎಂದಿದ್ದಾರೆ.
ರಾಜ್ಯಸಭಾ ಸ್ಥಾನಕ್ಕೆ ಮೊದಲು ದೇವೇಗೌಡರ ಹೆಸರು ಹೇಳಿದರು, ಸದಾನಂದಗೌಡರ ಹೆಸರುಗಳು ಕೇಳಿಬಂದಿದ್ದವು. ನಂತರ ಮಂಡ್ಯದ ಮೇಡಂ ಸುಮಲತಾ ಹೆಸರು ಕೇಳಿಬಂದಿತ್ತು. ಮಂಡ್ಯ ಮೇಡಂ ಗೂ ಅವರು ಟೋಪಿ ಹಾಕಿದರು. ಅವರಿಗೆ ಕೊಟ್ಟಿದ್ದರೆ ನಾವೇನು ಬೇಡ ಎನ್ನುತ್ತಿದ್ದೆವಾ? ಎಂದು ರೇವಣ್ಣ ಹೇಳಿದ್ದರು.

