HomeKarnatakaಗೋಡೆ ಕುಸಿತ ಪ್ರಕರಣ ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ! ಮೂಲಸೌಕರ್ಯ ಸುಧಾರಣೆಗೆ ವಿಶೇಷ...

ಗೋಡೆ ಕುಸಿತ ಪ್ರಕರಣ ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ! ಮೂಲಸೌಕರ್ಯ ಸುಧಾರಣೆಗೆ ವಿಶೇಷ ತಂಡ ರಚನೆ ಮಾಡಲಿ: ಆರ್.ಅಶೋಕ್ ಆಗ್ರಹ

ಬೆಂಗಳೂರು: ಬೆಂಗಳೂರಿನಲ್ಲಿ ಏ.29ರಂದು ಬಿರುಗಾಳಿ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ರಾತ್ರಿ ಸಂಭವಿಸಿದ ಗೋಡೆ ಕುಸಿತ ಪ್ರಕರಣ ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿ! ಎಂದಿದ್ದಾರೆ.

ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು ಓರ್ವ ಬಾಲಕಿ ಸೇರಿದಂತೆ 7 ಜನ ದುರ್ಮರಣಕ್ಕೀಡಾಗಿರುವ ಘಟನೆ ಇಡೀ ಬೆಂಗಳೂರು ನಗರದ ಜನತೆಯನ್ನ ಬೆಚ್ಚಿ ಬೀಳಿಸಿದೆ. ರಸ್ತೆಗುಂಡಿಗೆ, ವಿದ್ಯುತ್ ತಂತಿಗೆ, ಕುಸಿದ ಗೋಡೆಗೆ ನಾಗರೀಕರು ಸಾವನ್ನಪ್ಪಬೇಕಾದ ದುಸ್ಥಿತಿ ಯಾವ ನಾಗರೀಕ ಸಮಾಜಕ್ಕೆ ಶೋಭೆ ತರುವುದಿಲ್ಲ. ಅದರಲ್ಲೂ ಇಡೀ ದೇಶದ ಆರ್ಥಿಕ ಬೆನ್ನೆಲುಬಾಗಿರುವ ಬೆಂಗಳೂರಿನಂತಹ ನಗರದಲ್ಲಿ ಮೂಲಸೌಕರ್ಯ ಇಷ್ಟು ಹದಗೆಟ್ಟಿರುವುದು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಸರ್ಕಾರಕ್ಕೆ ತಲೆ ತಗ್ಗಿಸುವಂತಹ ವಿಷಯ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲೇ ಮುಂಗಾರು ಪೂರ್ವ ಮಳೆ ಬರುವುದು ವಾಡಿಕೆ. ನಿನ್ನೆ ಬಂದ ಮಳೆ ಆಕಸ್ಮಿಕ, ನಿನ್ನೆ ನಡೆದಿದ್ದು ಪ್ರಕೃತಿಯ ವಿಕೋಪ ಎಂದು ಯಾರಾದರೂ ವಾದಿಸಿದರೆ ಅದು ನಿನ್ನೆ ಜೀವ ಕಳೆದುಕೊಂಡ ದುರ್ದೈವಿಗಳಿಗೆ ಮತ್ತು ಅವರ ಕುಟುಂಬದವರಿಗೆ ಮಾತ್ರ ಮಾಡುವ ದ್ರೋಹವಲ್ಲ, ಬದಲಿಗೆ ತಮ್ಮ ಆತ್ಮಸಾಕ್ಷಿಗೆ ಮಾಡಿಕೊಳ್ಳುವ ಆತ್ಮವಂಚನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿರೋಧ ಪಕ್ಷದ ನಾಯಕನಾಗಿ ನಾನು ಕೇವಲ ರಾಜಕೀಯ ಮಾಡುತ್ತಿದ್ದೇನೆ, ಸಾವಿನಲ್ಲೂ ರಾಜಕಾರಣ ಮಾಡುತ್ತಿದ್ದೇನೆ ಎಂದು ಟೀಕೆ ಮಾಡುವವರು ಒಮ್ಮೆ ಯೋಚಿಸಲಿ. ಮುಂಗಾರು ಪೂರ್ವ ಮಳೆ ವಿಷಯ ಬಿಡಿ. ಮುಂಗಾರು ಮಳೆ ಆರಂಭಕ್ಕೆ ಇನ್ನು ನಾಲ್ಕು ವಾರ ಬಾಕಿ ಇದೆ. ಮುಖ್ಯಮಂತ್ರಿಗಳಾಗಲಿ, ಬೆಂಗಳೂರು ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿಗಳಾಗಲಿ, ಮಳೆಗಾಲ ನಿರ್ವಹಣೆ ಬಗ್ಗೆ ಈವರೆಗೂ ಒಂದಾದರೂ ಸಭೆ ನಡೆಸಿದ್ದಾರಾ? ರಸ್ತೆಗುಂಡಿ ಮುಚ್ಚುವ ಬಗ್ಗೆ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ತಿ ಬಗ್ಗೆ, ರಸ್ತೆಯಲ್ಲಿ ಬಿದ್ದಿರುವ, ನೇತಾಡುತ್ತಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವ ಬಗ್ಗೆ, ತಗ್ಗು ಪ್ರದೇಶಗಳಲ್ಲಿ, ಅಂಡರ್ ಪಾಸ್ ಗಳಲ್ಲಿ, ಸೇತುವೆಗಳ ಮೇಲೆ ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವ ಬಗ್ಗೆ, ರಾಜಕಾಲುವೆಗಳ ನಿರ್ವಹಣೆ ಬಗ್ಗೆ, ಹಳೆಯ ಮರಗಳು, ಜೋತು ಬಿದ್ದಿರುವ ಕೊಂಬೆಗಳನ್ನು ತೆಗೆಸುವ ಬಗ್ಗೆ, ಯಾವುದಾದರೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರಾ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ ಬಹುಶಃ ನಿನ್ನೆಯ ಅನಾಹುತವನ್ನು ತಪ್ಪಿಸಬಹುದಿತ್ತೇನೋ ಅಲ್ಲವೇ? ಎಂದು ಕೇಳಿದ್ದಾರೆ.

ಇನ್ನಾದರೂ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡು ಬೆಂಗಳೂರಿನ ಮೂಲಸೌಕರ್ಯವನ್ನು ಸುಧಾರಿಸುವ ಬಗ್ಗೆ ಗಮನ ಹರಿಸದೇ ಹೋದರೆ ಬೆಂಗಳೂರಿನ ಜನತೆ ಕಾಂಗ್ರೆಸ್ ಪಕ್ಷವನ್ನ ಎಂದಿಗೂ ಕ್ಷಮಿಸಲಾರರು. ನಿನ್ನೆ ಸಂಭವಿಸಿದ ಅವಘಡವನ್ನ ಎಚ್ಚರಿಕೆಯ ಗಂಟೆಯೆಂದು ಪರಿಗಣಿಸಿ ಈ ಕೂಡಲೇ ಬೆಂಗಳೂರಿನ ಮೂಲಸೌಕರ್ಯ ಸುಧಾರಣೆಗೆ ಒಂದು ವಿಶೇಷ ತಂಡ ರಚನೆ ಮಾಡಬೇಕು. ನಗರದಲ್ಲಿ ಮಳೆಯಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು.

ಇದೇ ರೀತಿ ಬೆಂಗಳೂರಿನ ಮೇಲಿನ ನಿರ್ಲಕ್ಷ್ಯವನ್ನು ಮುಂದುವರಿಸಿದರೆ, ಮುಂದಾಗುವ ಎಲ್ಲಾ ಅನಾಹುತಗಳಿಗೆ, ಹೋಗುವ ಪ್ರತಿ ಜೀವಕ್ಕೂ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular