ಅಹಮದಾಬಾದ್‌ನಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯದಲ್ಲಿ ಪ್ರವಾಸಿ ತಂಡ ಸೋಲು ಅನುಭವಿಸಿರಬಹುದು. ಆದರೆ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಮಾತ್ರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಕೇವಲ 35 ಎಸೆತಗಳಲ್ಲಿ 65 ರನ್ ಸಿಡಿಸುವ ಮೂಲಕ ಡಿ ಕಾಕ್, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರತದ ವಿರುದ್ಧ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬಟ್ಲರ್ ಮತ್ತು ಪೂರನ್ ದಾಖಲೆ ಉಡೀಸ್ ಈ ಪಂದ್ಯಕ್ಕೂ ಮುನ್ನ ಭಾರತದ ವಿರುದ್ಧ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಹಾಗೂ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಹೆಸರಿನಲ್ಲಿತ್ತು. ಇವರಿಬ್ಬರೂ ತಲಾ 5 ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ಅಹಮದಾಬಾದ್‌ನಲ್ಲಿ ಸಿಡಿಸಿದ ಸ್ಫೋಟಕ 65 ರನ್‌ಗಳ ನೆರವಿನಿಂದ ಡಿ ಕಾಕ್ 6ನೇ ಬಾರಿ ಈ ಸಾಧನೆ ಮಾಡಿ ಇವರಿಬ್ಬರನ್ನೂ ಹಿಂದಿಕ್ಕಿದ್ದಾರೆ. ವಿಶೇಷವೆಂದರೆ ಕೇವಲ 14 ಇನಿಂಗ್ಸ್‌ಗಳಲ್ಲಿ ಡಿ ಕಾಕ್ ಈ ಮೈಲಿಗಲ್ಲು ತಲುಪಿದ್ದಾರೆ.
ಮುಂಬೈ ಇಂಡಿಯನ್ಸ್‌ಗೆ ಬಂಪರ್ ಲಾಟರಿ ಐಪಿಎಲ್ 2026ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಡಿ ಕಾಕ್ ಅವರನ್ನು ಕೇವಲ 1 ಕೋಟಿ ರೂಪಾಯಿ ಮೂಲ ಬೆಲೆಗೆ ಖರೀದಿಸಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಡಿ ಕಾಕ್ ಅವರನ್ನು ಬೇರೆ ಯಾವ ತಂಡವೂ ಖರೀದಿಸಲು ಆಸಕ್ತಿ ತೋರದೇ ಇರುವುದು ಮುಂಬೈ ಪಾಲಿಗೆ ವರದಾನವಾಗಿದೆ. ಪ್ರಸ್ತುತ ಭಾರತದ ವಿರುದ್ಧ ಅವರು ತೋರುತ್ತಿರುವ ಅಮೋಘ ಫಾರ್ಮ್ ನೋಡಿದರೆ, ಉಳಿದ ತಂಡಗಳು ದೊಡ್ಡ ತಪ್ಪು ಮಾಡಿದಂತೆ ಕಾಣುತ್ತಿದೆ.
ಏಕದಿನದಲ್ಲೂ ಕಿಂಗ್ ಎನಿಸಿಕೊಂಡ ಡಿ ಕಾಕ್ ಟಿ20 ಮಾತ್ರವಲ್ಲದೆ ಏಕದಿನ ಕ್ರಿಕೆಟ್‌ನಲ್ಲೂ ಭಾರತದ ವಿರುದ್ಧ ಡಿ ಕಾಕ್ ಅಬ್ಬರ ಮುಂದುವರಿದಿದೆ. ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಅವರು ಶತಕ ಬಾರಿಸುವ ಮೂಲಕ ಭಾರತದ ವಿರುದ್ಧ ಅತಿ ಹೆಚ್ಚು ಏಕದಿನ ಶತಕ (7 ಶತಕ) ಬಾರಿಸಿದ ಸನತ್ ಜಯಸೂರ್ಯ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಭಾರತದ ಮಣ್ಣಿನಲ್ಲಿ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ಪ್ರವಾಸಿ ಬ್ಯಾಟರ್ ಆಗಿ ಎಬಿ ಡಿವಿಲಿಯರ್ಸ್ ಅವರೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

