ಸಂಜೆ ವೇಳೆ ಬಿಸಿಬಿಸಿಯಾಗಿ ಏನಾದರೂ ಚಾಟ್‌ಸ್ಟೈಲ್ ತಿನ್ನಬೇಕು ಅನ್ನಿಸಿದರೆ ಪಂಜಾಬಿ ಕತಿ ರೋಲ್ ಅತ್ಯುತ್ತಮ ಆಯ್ಕೆ. ಮಸಾಲೆಯುಕ್ತ ಚಿಕನ್ ಮತ್ತು ಮೊಟ್ಟೆಯ ಸಮ್ಮಿಶ್ರಣದೊಂದಿಗೆ ಮೃದುವಾದ ಚಪಾತಿಯಲ್ಲಿ ರೋಲ್ ಮಾಡಿ ಸವಿಯುವ ಈ ಸ್ಟ್ರೀಟ್ ಫುಡ್, ಲಂಚ್ ಬಾಕ್ಸ್ ಹಾಗೂ ಸಂಜೆಯ ಸ್ನ್ಯಾಕ್ಸ್ ಎರಡಕ್ಕೂ ಸೂಕ್ತವಾಗಿದೆ. ನಾಲಿಗೆಗೆ ಮಸ್ತ್ ಕಿಕ್ ನೀಡುವ ಉತ್ತರ ಭಾರತದ ಶೈಲಿಯ ಈ ಕತಿ ರೋಲ್ ಅನ್ನು ಮನೆಯಲ್ಲೇ ಸುಲಭವಾಗಿ ಹೇಗೆ ತಯಾರಿಸಬಹುದು ಎಂಬ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು
- ಚಿಕನ್ ಬ್ರೆಸ್ಟ್ – 100 ಗ್ರಾಂ
- ಮೊಟ್ಟೆ – 3 (ಸ್ಕ್ರ್ಯಾಂಬಲ್ಡ್ / ಬುರ್ಜಿ ಮಾಡಿಕೊಂಡಿದ್ದು)
- ಈರುಳ್ಳಿ – 1 (ಉದ್ದವಾಗಿ ಹೆಚ್ಚಿದ್ದು)
- ಶುಂಠಿ – 10 ಗ್ರಾಂ
- ಬೆಳ್ಳುಳ್ಳಿ – 10 ಗ್ರಾಂ
- ಟೊಮೆಟೊ ಪ್ಯೂರಿ – 20 ಮಿಲಿ
- ಗಟ್ಟಿ ಮೊಸರು – 20 ಮಿಲಿ (ಚೆನ್ನಾಗಿ ಕದಡಿದ್ದು)
- ಕಸ್ತೂರಿ ಮೇತಿ – 5 ಗ್ರಾಂ
- ಅಚ್ಚಖಾರದ ಪುಡಿ – 5 ಗ್ರಾಂ
- ಗರಂ ಮಸಾಲಾ – 5 ಗ್ರಾಂ
- ಚಾಟ್ ಮಸಾಲಾ – 5 ಗ್ರಾಂ
- ಆಲಿವ್ ಆಯಿಲ್ ಅಥವಾ ಅಡುಗೆ ಎಣ್ಣೆ – 15 ಮಿಲಿ
- ಚಪಾತಿ – 3 ರಿಂದ 4 (ಮೊದಲೇ ಸಿದ್ಧಪಡಿಸಿದ್ದು)
- ಜೀರಿಗೆ – ಅರ್ಧ ಚಮಚ
ತಯಾರಿಸುವ ವಿಧಾನ
ಮೊದಲ ಹಂತ: ಮೊದಲು ಚಿಕನ್ ಅನ್ನು ಸ್ವಚ್ಛಗೊಳಿಸಿ ಅರ್ಧ ಸೆಂಟಿಮೀಟರ್ ಗಾತ್ರದ ಸಣ್ಣ ಪಟ್ಟಿಗಳಾಗಿ (ಸ್ಟ್ರಿಪ್ಸ್) ಕತ್ತರಿಸಿ ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.
ಎರಡನೇ ಹಂತ: ಒಂದು ನಾನ್-ಸ್ಟಿಕ್ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಜೀರಿಗೆ ಹಾಕಿ ಸಿಡಿಸಿ. ಬಳಿಕ ಉದ್ದವಾಗಿ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.
ಮೂರನೇ ಹಂತ: ಈಗ ಕತ್ತರಿಸಿ ಇಟ್ಟುಕೊಂಡ ಚಿಕನ್ ತುಂಡುಗಳನ್ನು ಪ್ಯಾನ್‌ಗೆ ಸೇರಿಸಿ, ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ಚಿಕನ್ ಚೆನ್ನಾಗಿ ಬೆಂದ ನಂತರ ಅದಕ್ಕೆ ಟೊಮೆಟೊ ಪ್ಯೂರಿ, ಅಚ್ಚಖಾರದ ಪುಡಿ, ಗರಂ ಮಸಾಲಾ, ಚಾಟ್ ಮಸಾಲಾ ಮತ್ತು ಕದಡಿದ ಮೊಸರನ್ನು ಸೇರಿಸಿ ಮಿಶ್ರಣ ಮಾಡಿ. ಕೊನೆಯಲ್ಲಿ ಕಸ್ತೂರಿ ಮೇತಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಸಾಲೆ ಗಟ್ಟಿಯಾಗುವವರೆಗೆ ಬೇಯಿಸಿ ಒಲೆಯಿಂದ ಕೆಳಗಿಳಿಸಿ.
ನಾಲ್ಕನೇ ಹಂತ: ಮೊದಲೇ ಸಿದ್ಧಪಡಿಸಿಟ್ಟುಕೊಂಡ ಒಂದು ಚಪಾತಿಯನ್ನು ಪ್ಲೇಟ್ ಮೇಲೆ ಇಟ್ಟು, ಅದರ ಮಧ್ಯಭಾಗದಲ್ಲಿ ಸಿದ್ಧಪಡಿಸಿದ ಚಿಕನ್ ಮಸಾಲೆ ಮಿಶ್ರಣವನ್ನು ಹರಡಿ. ಅದರ ಮೇಲ್ಭಾಗದಲ್ಲಿ ಮೊದಲೇ ಸಿದ್ಧಪಡಿಸಿಟ್ಟುಕೊಂಡ ಮೊಟ್ಟೆಯ ಬುರ್ಜಿಯನ್ನು (ಸ್ಕ್ರ್ಯಾಂಬಲ್ಡ್ ಎಗ್) ಹಾಕಿ.
ಐದನೇ ಹಂತ: ಈಗ ಚಪಾತಿಯನ್ನು ಗಟ್ಟಿಯಾಗಿ ರೋಲ್ ಮಾಡಿ, ಮಧ್ಯಕ್ಕೆ ಎರಡು ಭಾಗವಾಗಿ ಕತ್ತರಿಸಿದರೆ ರುಚಿಕರವಾದ ಪಂಜಾಬಿ ಕತಿ ರೋಲ್ ಸಿದ್ಧವಾಗುತ್ತದೆ.
ಇದನ್ನು ಬಿಸಿಬಿಸಿಯಾಗಿರುವಾಗಲೇ ಪುದೀನಾ ಚಟ್ನಿ ಮತ್ತು ವಿನೆಗರ್ ಈರುಳ್ಳಿ (ಪಿಕ್ಕಲ್ಡ್ ಆನಿಯನ್) ಜೊತೆ ಸರ್ವ್ ಮಾಡಿದರೆ ಪಕ್ಕಾ ರೆಸ್ಟೋರೆಂಟ್ ಶೈಲಿಯ ಮಜಾ ಸಿಗುತ್ತದೆ.

