ಪುಣೆ: ಟ್ರಾಫಿಕ್ ಜಾಮ್ ಅಥವಾ ತಪ್ಪು ಪಾರ್ಕಿಂಗ್ ಕಾರಣದಿಂದ ರಸ್ತೆಯಲ್ಲಿ ಜಗಳವಾಗುವುದು ಹೊಸದೇನಲ್ಲ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಮಾತ್ರ ತೀರಾ ಭಿನ್ನವಾಗಿದೆ. ನೋ ಪಾರ್ಕಿಂಗ್ ಜಾಗದಲ್ಲಿ ನಿಂತಿದ್ದ ಕಾರೊಂದನ್ನು ವ್ಯಕ್ತಿಯೊಬ್ಬರು ತನ್ನ ಬರಿಗೈ ಬಲದಿಂದಲೇ ತಳ್ಳಿ ಪಾರ್ಕ್ ಮಾಡಿದ ವಿಚಿತ್ರ ಹಾಗೂ ರೋಮಾಂಚನಕಾರಿ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಯುವಕನ ಈ ಸಾಹಸ ಮತ್ತು ಜಿಮ್ ಶಕ್ತಿಗೆ ನೆಟ್ಟಿಗರು ಜೈ ಅಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ‘ರೀಲ್’
ಇನ್‌ಸ್ಟಾಗ್ರಾಮ್‌ನ karma____believer_ ಎಂಬ ಖಾತೆಯಲ್ಲಿ ಶೇರ್ ಆಗಿರುವ ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದೆ. ಪುಣೆಯ ಸುಂದರವಾದ ವಸತಿ ಪ್ರದೇಶದ ರಸ್ತೆಯೊಂದರಲ್ಲಿ ಮಿನಿ ಎಸ್‌ಯುವಿ (Mini SUV) ಕಾರೊಂದನ್ನು ಪಾರ್ಕ್ ಮಾಡಲಾಗಿತ್ತು. ಆದರೆ ಆ ಕಾರಿನ ಹಿಂಭಾಗ ರಸ್ತೆಗೆ ಚಾಚಿಕೊಂಡಿದ್ದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಕಂಡ ಮತ್ತೊಬ್ಬ ವ್ಯಕ್ತಿ, ಕಾರಿನ ಮಾಲೀಕನಿಗೆ “ಭಾಯ್, ಗಾಡಿ ರಸ್ತೆ ಮಧ್ಯೆ ನಿಂತಿದೆ ನೋಡು” ಎಂದಿದ್ದಾನೆ. ಅದಕ್ಕೆ ಆ ಮಾಲೀಕ ತಮಾಷೆಯಾಗಿ “ಹಾಗಾದ್ರೆ ಈಗ ಏನು ಮಾಡ್ಲಿ?” ಎಂದು ಕೇಳಿದ್ದಾನೆ. ತಕ್ಷಣವೇ ಆ ವ್ಯಕ್ತಿ “ಏನಾದರೂ ಮಾಡು ಸ್ವಾಮಿ” ಎಂದಿದ್ದೇ ತಡ, ಅಲ್ಲಿ ಅಸಲಿ ಕಥೆ ಶುರುವಾಗಿದೆ.
ಬರಿಗೈಯಲ್ಲೇ ಕಾರು ತಳ್ಳಿದ ಜಿಮ್ ಪ್ರೇಮಿ!
ಕೂಲಿಂಗ್ ಗ್ಲಾಸ್, ಸ್ವೆಟ್‌ಶರ್ಟ್ ಹಾಗೂ ಶಾರ್ಟ್ಸ್ ಧರಿಸಿದ್ದ ಆ ಜಿಮ್ ಪ್ರೇಮಿ, ಮೊದಲು ತನಗಿದ್ದ ಬ್ಯಾಗ್‌ಅನ್ನು ಆ ಕಾರಿನ ಮೇಲ್ಛಾವಣಿಯ (Roof) ಮೇಲೆ ಇಟ್ಟಿದ್ದಾನೆ. ನಂತರ ಕಾರಿಗೆ ಮೈಯೊಡ್ಡಿ, ತನ್ನ ಎರಡೂ ಕೈಗಳಿಂದ ಕಾರಿನ ಹಿಂಭಾಗವನ್ನು ಗಟ್ಟಿಯಾಗಿ ಹಿಡಿದು ರಸ್ತೆಯಿಂದ ಫುಟ್‌ಪಾತ್ ಕಡೆಗೆ ಜೋರಾಗಿ ತಳ್ಳಿದ್ದಾನೆ. ಆಶ್ಚರ್ಯವೆಂದರೆ, ಆತನ ಭುಜದ ಬಲಕ್ಕೆ ಆ ಭಾರಿ ತೂಕದ ಕಾರು ಇಂಚಿಂಚಾಗಿ ಜರಗಿ, ರಸ್ತೆಯಲ್ಲಿ ಇತರ ವಾಹನಗಳು ಹೋಗಲು ಜಾಗ ಮಾಡಿಕೊಟ್ಟಿದೆ!
ಕೆಲಸ ಮುಗಿದ ತಕ್ಷಣ ಆ ಯುವಕ ಕ್ಯಾಮೆರಾ ಕಡೆ ನೋಡಿ ಮುಗುಳ್ನಕ್ಕಿದ್ದಾನೆ. ಈ ವಿಡಿಯೋಗೆ “ಕೊನೆಗೂ ಜಿಮ್ ವರ್ಕೌಟ್ ಫುಲ್ ಪೈಸಾ ವಸೂಲ್ ಆಯ್ತು” ಎಂಬ ಅಡಿಬರಹ ನೀಡಲಾಗಿದ್ದು, ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.
ನೆಟ್ಟಿಗರ ಕಾಮೆಂಟ್ಸ್ ಮಹಾಪೂರ!
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ, “ವರ್ಕೌಟ್‌ಗೆ ಮುನ್ನ ಇದೊಂದು ಸಣ್ಣ ಕ್ಯಾಶುಯಲ್ ವಾರ್ಮ್-ಅಪ್ ಅಷ್ಟೇ” ಎಂದು ತಮಾಷೆ ಮಾಡಿದರೆ, ಮತ್ತೊಬ್ಬರು “ಇವನಿಗೆ ಜಿಮ್ ಶಕ್ತಿ ಏನೋ ಸೂಪರ್ ಆಗಿದೆ, ಆದರೆ ಪಾರ್ಕಿಂಗ್ ಸ್ಕಿಲ್ಸ್ ಮಾತ್ರ ತುಂಬಾ ಪೂರ್ ಆಗಿದೆ!” ಎಂದು ಕಾಲೆಳೆದಿದ್ದಾರೆ. ಇನ್ನೂ ಕೆಲವರು ಈತನನ್ನು ಮಾರ್ವೆಲ್ ಸಿನಿಮಾದ ‘ಹಲ್ಕ್’ ಪಾತ್ರಕ್ಕೆ ಹೋಲಿಸಿ ಕೊಂಡಾಡಿದ್ದಾರೆ.
ಒಟ್ಟಿನಲ್ಲಿ ಕಾರು ರಿವರ್ಸ್ ಗೇರ್ ಹಾಕಿ ಪಾರ್ಕ್ ಮಾಡುವ ಜಾಗದಲ್ಲಿ, ತನ್ನ ಬಾಹುಬಲ ಪ್ರದರ್ಶಿಸಿ ಕಾರನ್ನೇ ತಳ್ಳಿದ ಈ ಪುಣೆ ಯುವಕನ ವೀಡಿಯೋ ಮಾತ್ರ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

