ಆಸ್ತಿ ಹಾಗೂ ಹಣದ ದುರಾಸೆಗೆ ಸಂಬಂಧಗಳೇ ಬಲಿಯಾಗುತ್ತಿರುವ ಈ ಕಾಲದಲ್ಲಿ, ಹೆತ್ತ ತಂದೆಯ ಮೇಲೆಯೇ ಇಬ್ಬರು ಮಕ್ಕಳು ನಡುರಸ್ತೆಯಲ್ಲಿ ಮೃಗೀಯವಾಗಿ ಹಲ್ಲೆ ನಡೆಸಿರುವ ಕರುಳು ಹಿಂಡುವ ಘಟನೆಯೊಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರದಲ್ಲಿ ನಡೆದಿದೆ. 65 ವರ್ಷದ ವೃದ್ಧ ತಂದೆಯನ್ನು ಇಬ್ಬರು ಮಕ್ಕಳು ದೊಣ್ಣೆಯಿಂದ ಬರ್ಬರವಾಗಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಲ್ಲೆಗೊಳಗಾದ ವೃದ್ಧ ತಂದೆಯನ್ನು ತುಕಾರಾಮ್ ರಾವುತ್ ಎಂದು ಗುರುತಿಸಲಾಗಿದ್ದು, ಘಟನೆ ಸಂಬಂಧ ಇಬ್ಬರು ಪುತ್ರರ ವಿರುದ್ಧ ಇಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಮೀನು ಮಾರಾಟದ ವಿವಾದವೇ ಕಾರಣ: ಪೊಲೀಸ್ ದೂರಿನ ಪ್ರಕಾರ, ತುಕಾರಾಮ್ ರಾವುತ್ ಅವರ ಪತ್ನಿ ಅಂಜನಾ ರಾವುತ್ ಹೆಸರಿನಲ್ಲಿರುವ ಜಮೀನಿನ ತುಂಡೊಂದನ್ನು ಮಾರಾಟ ಮಾಡುವ ವಿಚಾರದಲ್ಲಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ತಂದೆಯು ಆ ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದಕ್ಕೆ ಇಬ್ಬರು ಪುತ್ರರಾದ ಸಂಜಯ್ ತುಕಾರಾಮ್ ರಾವುತ್ ಮತ್ತು ರಾಜೇಂದ್ರ ತುಕಾರಾಮ್ ರಾವುತ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ತಂದೆ-ಮಕ್ಕಳ ನಡುವೆ ನಿರಂತರ ಕಲಹ ನಡೆಯುತ್ತಿತ್ತು.
ನಡುರಸ್ತೆಯಲ್ಲೇ ದೊಣ್ಣೆಯಿಂದ ಅಮಾನುಷ ಹಲ್ಲೆ: ಇಂದಾಪುರ ನಗರದ ಸಲೀಂ ಲಾನ್ಸ್ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ತಂದೆಯನ್ನು ಅಡ್ಡಗಟ್ಟಿದ ಇಬ್ಬರು ಪುತ್ರರು, ಜಮೀನು ಮಾರಾಟದ ವಿಚಾರ ತೆಗೆದು ವಾಗ್ವಾದಕ್ಕಿಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಕೋಪೋದ್ರಿಕ್ತರಾದ ಪುತ್ರರು ಮರದ ದೊಣ್ಣೆಗಳಿಂದ ಸಾರ್ವಜನಿಕರ ಸಮ್ಮುಖದಲ್ಲೇ ತಂದೆಯ ಮೇಲೆ ಮುಗಿಬಿದ್ದಿದ್ದಾರೆ. ರಸ್ತೆಯಲ್ಲೇ ಬಿದ್ದು ನರಳುತ್ತಿದ್ದ ವೃದ್ಧ ತಂದೆಗೆ ಇಬ್ಬರೂ ಸೇರಿ ನಿರ್ದಯವಾಗಿ ಹೊಡೆದು ಹಿಂಸಿಸಿದ್ದಾರೆ.
ಅಲ್ಲಿ ನೆರೆದಿದ್ದ ಸಾರ್ವಜನಿಕರೊಬ್ಬರು ಈ ಅಮಾನವೀಯ ಕೃತ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಕ್ಕಳ ಕ್ರೌರ್ಯಕ್ಕೆ ಹಿಡಿಶಾಪ ಹಾಕಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ತಂದೆ: ಮಕ್ಕಳ ಈ ಅಮಾನುಷ ಹಲ್ಲೆಯಿಂದ ನೊಂದ ತುಕಾರಾಮ್ ರಾವುತ್, ನೇರವಾಗಿ ಇಂದಾಪುರ ಪೊಲೀಸ್ ಠಾಣೆಗೆ ತೆರಳಿ ತನ್ನಿಬ್ಬರು ಪುತ್ರರ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ. ತಂದೆಯ ದೂರಿನ ಮೇರೆಗೆ ಪೊಲೀಸರು ಸಂಜಯ್ ರಾವುತ್ ಮತ್ತು ರಾಜೇಂದ್ರ ರಾವುತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಆಸ್ತಿಗಾಗಿ ಹೆತ್ತವರನ್ನೇ ಬೀದಿಗೆ ತಳ್ಳಿ ಹಲ್ಲೆ ನಡೆಸಿದ ಇಂತಹ ಕೃತಘ್ನ ಮಕ್ಕಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

