ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ 2027ರ ಜನಗಣತಿ ಸರ್ವೆ ಕಾರ್ಯದಿಂದ ಬಿಡುಗಡೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಉಪನ್ಯಾಸಕರಿಗೆ ಹೆಚ್ಚುವರಿ ಜವಾಬ್ದಾರಿ ಮತ್ತು ತರಬೇತಿಗಳು ಇರುವುದರಿಂದ ಜನಗಣತಿ ಸಮೀಕ್ಷೆಯಿಂದ ವಿನಾಯಿತಿ ನೀಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಪತ್ರ ಬರೆಯಲಾಗಿದೆ. ಏಪ್ರಿಲ್ 1ರಿಂದ 20ರವರೆಗೆ 20 ದಿನಗಳ ವಿಜ್ಞಾನ ಸಂಯೋಜನೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳಿವೆ. ದ್ವಿತೀಯ ಪಿಯುಸಿ ಫಲಿತಾಂಶದ ನಂತರ ಅಂಕಗಳ ಮರು ಎಣಿಕೆ ಹಾಗೂ ಮರುಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಬೇಕಿದೆ. ಈ ಎಲ್ಲಾ ಕೆಲಸಗಳ ನಡುವೆ ಜನಗಣತಿ ನಡೆಸುವುದು ಕಷ್ಟಕರವಾಗಲಿದೆ ಎಂದು ಹೇಳಲಾಗಿದೆ.
ಗ್ರೇಟರ್ ಬೆಂಗಳೂರು ಪಾಲಿಕೆಯ ಮುಖ್ಯ ಆಯುಕ್ತರು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ನಿರ್ದೇಶನ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ.
ಏಪ್ರಿಲ್ 1ರಿಂದ 20ರವರೆಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಿಗದಿಯಾಗಿವೆ. ಏಪ್ರಿಲ್ 10 ರಿಂದ ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆಯ ಪರೀಕ್ಷೆಗಳಿವೆ. ಏಪ್ರಿಲ್ 23, 24ರಂದು ಸಿಇಟಿ ನಡೆಯಲಿದೆ. ಏಪ್ರಿಲ್ 25 ರಿಂದ ಮೇ 8 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ 2 ನಿಗದಿಯಾಗಿದೆ. ಮೇ 3 ರಂದು ನೀಟ್, ಏಪ್ರಿಲ್ 7ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದರೆ ನಂತರ ಆರಂಭವಾಗುವ ಅಂಕಗಳ ಮರು ಎಣಿಕೆ, ಮರು ಮೌಲ್ಯಮಾಪನ ಪ್ರಕ್ರಿಯೆಗಳಿವೆ. ಇವೆಲ್ಲವನ್ನೂ ಉಪನ್ಯಾಸಕರು ನಿರ್ವಹಿಸಬೇಕಿದೆ. ಒಂದೇ ಸಮಯದಲ್ಲಿ ಜನಗಣತಿ ಕಾರ್ಯ ಮತ್ತು ಈ ಸಾಲು ಸಾಲು ಪರೀಕ್ಷಾ ಜವಾಬ್ದಾರಿ ನಿಭಾಯಿಸುವುದು ಪ್ರಾಯೋಗಿಕವಾಗಿ ಅಸಾಧ್ಯ. ಹೀಗಾಗಿ ಗಣತಿಯಿಂದ ವಿನಾಯಿತಿ ನೀಡಬೇಕು ಎಂದು ಮನವಿ ಪತ್ರದಲ್ಲಿ ಉಪನ್ಯಾಸಕರ ಸಂಘ ತಿಳಿಸಿದೆ.

