HomeLatest Newsದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ವಿರೋಧಿಸಿ ಶಿಕಾರಿಪುರದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ

ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ವಿರೋಧಿಸಿ ಶಿಕಾರಿಪುರದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ

ಶಿವಮೊಗ್ಗ: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ಅನ್ನು ಯಾವುದೇ ಕಾರಣಕ್ಕೂ ಅಂಗೀಕರಿಸದಂತೆ ಒತ್ತಾಯಿಸಿ ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.

ತಹಸೀಲ್ದಾರ್ ಕಚೇರಿ ಮುಂದೆ ಇಂದು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯದ ಕಾಂಗ್ರೆಸ್ ಸರ್ಕಾರವು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆ ಮೂಲಕ ಪ್ರಜಾಪ್ರಭುತ್ವ ವಿರೋಧಿ ಮತ್ತು ಡಾ. ಅಂಬೇಡ್ಕರರ ಸಂವಿಧಾನದ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂದು ಆಕ್ಷೇಪಿಸಿದ್ದಾರೆ.

1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಕರಾಳ ದಿನಗಳನ್ನು ತಂದಿಟ್ಟಿದ್ದರು. ಅದನ್ನು ಜನರು ಮರೆತಿಲ್ಲ. ಕಾಂಗ್ರೆಸ್ ಸರ್ಕಾರವು ಈ ಮಸೂದೆ ಮೂಲಕ ತುರ್ತು ಪರಿಸ್ಥಿತಿ ಹೇರುವ ಸಂದರ್ಭವನ್ನು ಸೃಷ್ಟಿ ಮಾಡಿದೆ ಎಂದು ಆರೋಪಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂವಿಧಾನವಿರೋಧಿ, ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ದೇಶದ್ರೋಹಿಗಳ ವಿರುದ್ಧ ಸಿದ್ದರಾಮಯ್ಯರ ಸರ್ಕಾರ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಅಂಥ ದೇಶವಿರೋಧಿಗಳನ್ನು ಈ ಕಾಂಗ್ರೆಸ್ ಸರ್ಕಾರ ಸಹಿಸಿಕೊಳ್ಳುತ್ತಿದೆ. ಈ ಮಸೂದೆ ಹಿಂದೂಗಳ ವಿರೋಧಿ ಎಂದು ಟೀಕಿಸಿದರು.

ಕರ್ನಾಟಕದಲ್ಲಿ ಭಾರತ್ ಮಾತಾ ಕೀ ಜೈ ಎನ್ನುವವರ ವಿರುದ್ಧ ಎಫ್‍ಐಆರ್ ದಾಖಲಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಹಿಂದೂ ಕಾರ್ಯಕರ್ತರ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದೆ. ಹಿಂದೂಗಳನ್ನು ಅಪಮಾನಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಹಿಂದೂಗಳು ಹಿಂಸೆಯ ಪರವಾಗಿದ್ದಾರೆ ಎಂಬ ಧಾಟಿಯಲ್ಲಿ ಮುಖ್ಯಮಂತ್ರಿಗಳು ಮಾತನಾಡುತ್ತಾರೆಂದರೆ, ಈ ರಾಜ್ಯದ ಮುಖ್ಯಮಂತ್ರಿಗಳು, ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳ ಬಗ್ಗೆ ಮತ್ತು ಎಷ್ಟು ಅಸಡ್ಡೆ ಇದೆ, ಎಷ್ಟು ಕೋಪ ಇದೆ ಎಂದು ಗೊತ್ತಾಗುತ್ತದೆ. ಇಂಥ ನಾಲಾಯಕ್, ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲು ಮಾಡಿದರೆ, ನಾಲಾಯಕ್ ಸರ್ಕಾರ ಎಂದರೆ ಎಫ್‍ಐಆರ್ ಮಾಡಲಿದ್ದಾರೆ. ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲು ಹೊರಟಿದೆ ಎಂದು ತಿಳಿಸಿದರು.

ವಿಪಕ್ಷಗಳ ಧ್ವನಿಯನ್ನೂ ದಮನ ಮಾಡಲು ಹೊರಟಿದ್ದಾರೆ. ಮುಂದಿನ ವಾರ ನಾನು, ವಿಪಕ್ಷ ನಾಯಕರು, ಶಾಸಕರು, ವಿಧಾನಪರಿಷತ್ ಸದಸ್ಯರು ರಾಜ್ಯಪಾಲರನ್ನೂ ಭೇಟಿ ಮಾಡಲಿದ್ದೇವೆ. ಸರ್ಕಾರದ ಈ ಜನವಿರೋಧಿ ನಡೆಯನ್ನು ರಾಜ್ಯಪಾಲರ ಗಮನಕ್ಕೆ ತಂದು, ಮಧ್ಯಸ್ಥಿಕೆ ವಹಿಸಲು ಕೋರುತ್ತೇವೆ. ಕಾಂಗ್ರೆಸ್ ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ರಾಜ್ಯಪಾಲರು ಮಾಡಬೇಕೆಂಬ ಮನವಿ ಮಾಡಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷರಾದ ಸಿ.ಮಂಜುಳಾ, ಜಿಲ್ಲಾ ಕಾರ್ಯದರ್ಶಿ ಹುಲ್ಮಾರ್ ಮಹೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ಮಂಡಲ ಅಧ್ಯಕ್ಷ ಹನುಮಂತಪ್ಪ ಇತರರು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular