HomeKarnatakaಸರ್ಕಾರಿ ಹುದ್ದೆ ಖಾಲಿ ಇರುವುದಕ್ಕೆ ಬಿಜೆಪಿ ಕಾರಣ: ಸಿದ್ದರಾಮಯ್ಯ ಮಾತಿಗೆ ಬಿಜೆಪಿ ತಿರುಗೇಟು

ಸರ್ಕಾರಿ ಹುದ್ದೆ ಖಾಲಿ ಇರುವುದಕ್ಕೆ ಬಿಜೆಪಿ ಕಾರಣ: ಸಿದ್ದರಾಮಯ್ಯ ಮಾತಿಗೆ ಬಿಜೆಪಿ ತಿರುಗೇಟು

ವಿವಿಧ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಮಂಗಳವಾರ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಬಿಜೆಪಿ ಈ ಪ್ರತಿಭಟನೆಗೆ ಬೆಂಬಲ ನೀಡಿತ್ತು.

ಈ ಪ್ರತಿಭಟನೆ ಬಗ್ಗೆ ಪೋಸ್ಟ್ ಹಾಕಿದ್ದ ಸಿಎಂ ಸಿದ್ದರಾಮಯ್ಯ, ‘ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಅನುಭವಿಸುತ್ತಿರುವ ಆತಂಕ, ನಿರಾಶೆ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ’ ಎಂದು ಹೇಳಿದ್ದರು.

‘ಉದ್ಯೋಗಕ್ಕಾಗಿ ಸಲ್ಲಿಸುವ ಪ್ರತಿ ಅರ್ಜಿಯ ಹಿಂದೆ ಒಂದು ಕನಸಿರುತ್ತದೆ, ಕುಟುಂಬದ ನಿರೀಕ್ಷೆ, ವರ್ಷಗಳ ಕಠಿಣ ಪರಿಶ್ರಮ ಮತ್ತು ನಾಡಿಗಾಗಿ ಸೇವೆ ಸಲ್ಲಿಸುವ ಆಕಾಂಕ್ಷೆ ಇರುತ್ತದೆ. ಯುವಜನರ ಆತಂಕ – ಅಹವಾಲುಗಳು ನನ್ನನ್ನು ತಲುಪಿದೆ. ಅವರ ಭವಿಷ್ಯ ನಮಗೂ ಅತ್ಯಂತ ಮಹತ್ವದ್ದಾಗಿದೆ’ ಎಂದು ತಿಳಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿ ವಿರುದ್ಧ ಆರೋಪ: ಸಿದ್ದರಾಮಯ್ಯ ತಮ್ಮ ಪೋಸ್ಟ್‌ನಲ್ಲಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ‘ನಾವು ಅಧಿಕಾರಕ್ಕೆ ಬಂದಾಗ, 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಇದು ಒಂದೆರೆಡು ದಿನಗಳಲ್ಲಿ ಸೃಷ್ಟಿಯಾದುದಲ್ಲ; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ಸೂಕ್ತ ಯೋಜನೆಯನ್ನು ರೂಪಿಸದಿರುವುದರಿಂದ ಇಷ್ಟು ದೊಡ್ಡ ಸಂಖ್ಯೆಯ ಸರ್ಕಾರಿ ಹುದ್ದೆಗಳು ಖಾಲಿಯಿದ್ದವು’ ಎಂದು ಹೇಳಿದ್ದರು.

 ‘ವಿರೋಧ ಪಕ್ಷದ ನಾಯಕರು ನಿರಪರಾಧಿ ವಿದ್ಯಾರ್ಥಿಗಳಿಗೆ ತಪ್ಪು ಮಾರ್ಗದರ್ಶನ ಮಾಡಿ ತಮ್ಮ ರಾಜಕೀಯ ಸ್ವಾರ್ಥದ ಈಡೇರಿಕೆಗಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ.  ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಜನರನ್ನು ಉಜ್ವಲ ಭವಿಷ್ಯದ ಕಡೆ ಯೋಚಿಸಲು ಪ್ರೇರೇಪಿಸುವ ಬದಲು, ಅವರ ಮೂಲಕ ಅಶಾಂತಿಯನ್ನು ಉಂಟುಮಾಡಲು ಹೊರಟಿರುವ ವಿಪಕ್ಷ ನಾಯಕರ ನಡೆ ಖಂಡನೀಯ’ ಎಂದು ದೂರಿದ್ದರು.

ಬಿಜೆಪಿ ಪ್ರತಿಕ್ರಿಯೆ: ಸಿದ್ದರಾಮಯ್ಯ ಪೋಸ್ಟ್‌ಗೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ತಿರುಗೇಟು ನೀಡಿದ್ದು, ’ವಿಪಕ್ಷಗಳು ಉದ್ಯೋಗಾಕಾಂಕ್ಷಿ ಯುವಕರ ದಾರಿ ತಪ್ಪಿಸುತ್ತಿವೆ ಎಂದು ಸಿಎಂ ಸಿದ್ದರಾಮಯ್ಯನವರು ಮತ್ತೊಂದು ಹಸಿ ಹಸಿ ಸುಳ್ಳು ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ.

‘ಸಿದ್ದರಾಮಯ್ಯನವೇ ಇನ್ನೆಷ್ಟು ದಿನ ಈ ಸುಳ್ಳುಬಾಕತನದಿಂದ ಯುವಜನರ ಹಾದಿ ತಪ್ಪಿಸುತ್ತೀರಿ ? ರಾಜ್ಯದಲ್ಲಿ ಇಂದು ಯುವಕರು ಈ ಪ್ರಮಾಣದಲ್ಲಿ ಉದ್ಯೋಗಕ್ಕಾಗಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ನಿಮ್ಮ ಸರ್ಕಾರದ‌ ನೀತಿಗಳೇ ಕಾರಣ. ದಿವಾಳಿಯಾದ ಆಡಳಿತದಿಂದ ಹೊಸ ಉದ್ಯೋಗಿಗಳಿಗೆ ಸಂಬಳ ನೀಡುವುದಕ್ಕೆ ಹಣವಿಲ್ಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಅಲವತ್ತುಕೊಳ್ಳುತ್ತಿರುವುದು ಈಗ ಗುಟ್ಟಿನ ಮಾತಲ್ಲ’ ಎಂದು ಹೇಳಿದ್ದಾರೆ.

‘ಇದರ ಜತೆಗೆ ಬದ್ಧತೆ ಇಲ್ಲದೇ ವ್ಯವಸ್ಥೆ ಇನ್ನಷ್ಟು ಬಿಗಡಾಯಿಸಲಿ ಎಂದೇ ನೀವು ಮೀಸಲು ವರ್ಗೀಕರಣ ಮಾಡಿದ್ದೀರಿ. ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಕ್ಕೆ ವ್ಯತಿರಿಕ್ತವಾಗಿ ನೀವು ಮಾಡಿದ ಮೀಸಲು ವರ್ಗೀಕರಣ ವಿವಾದ ಈಗ ಎಲ್ಲ ಸಮುದಾಯದ ಯುವಕರನ್ನು ಹೈರಾಣಾಗಿಸಿದೆ. ಬಿತ್ತಿದ್ದೇ ಬೆಳೆಯುವುದು ಸ್ವಾಮಿ. ಇನ್ನೆಷ್ಟು ದಿನ ಪ್ರತಿಪಕ್ಷದ ಮೇಲೆ ಗೂಬೆ ಕೂರಿಸಿ ಹೊಟ್ಟೆ ಹೊರೆದುಕೊಳ್ಳುತ್ತೀರಿ?’ ಎಂದು ಪ್ರಶ್ನೆ ಮಾಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular