ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಆಘಾತಗಳು ಹಲವು ಬಾರಿ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ಪ್ರೊಫೆಸರ್ ನಿಧಿ ಕಟಾರೆ ಅವರ ಬದುಕು ಅತ್ಯುತ್ತಮ ನಿದರ್ಶನವಾಗಿದೆ. ತಾವು 10 ವರ್ಷಗಳ ಕಾಲ ದುಡಿದು, ಪ್ರಯೋಗಾಲಯಗಳನ್ನು ನಿರ್ಮಿಸಿದ ಕಾಲೇಜಿನ ಕಟ್ಟಡವೇ ಕಣ್ಣೆದುರು ನೆಲಸಮವಾದಾಗ ಧೃತಿಗೆಡದ ಈ ಮಹಿಳೆ, ಇಂದು ಅಣಬೆ ಕೃಷಿಯ ಮೂಲಕ ತಿಂಗಳಿಗೆ ಸುಮಾರು 1.5 ಲಕ್ಷ ರೂಪಾಯಿ ಗಳಿಸುವ ಯಶಸ್ವಿ ಮಹಿಳಾ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.
ಉತ್ತರ ಪ್ರದೇಶದ ಫಾರೂಖಾಬಾದ್ನಲ್ಲಿ ಬೆಳೆದ ನಿಧಿ, ಗ್ವಾಲಿಯರ್ನ ಜಿವಾಜಿ ವಿಶ್ವವಿದ್ಯಾಲಯದಿಂದ ಸೂಕ್ಷ್ಮ ಜೀವವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2007 ರಲ್ಲಿ ಗ್ವಾಲಿಯರ್ನ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ವೃತ್ತಿಜೀವನ ಆರಂಭಿಸಿದ್ದ ಅವರು, ಪಠ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ಅಣಬೆ ಬೇಸಾಯದ ಬಗ್ಗೆ ಬೋಧಿಸುತ್ತಿದ್ದರು. ಆದರೆ 2016 ರಲ್ಲಿ ಕಾಲೇಜು ಆಡಳಿತ ಮಂಡಳಿಯು ಜಮೀನಿನ ಲಾಭಕ್ಕಾಗಿ ಇಡೀ ಕ್ಯಾಂಪಸ್ ಅನ್ನು ನೆಲಸಮಗೊಳಿಸಿತು. ದಶಕಗಳ ಪರಿಶ್ರಮ ಕಣ್ಣೆದುರೇ ಹಾಳಾಗಿದ್ದನ್ನು ಕಂಡು ತೀವ್ರ ಆಘಾತಕ್ಕೆ ಒಳಗಾದ ಅವರು, ಇತರ ಕಾಲೇಜುಗಳ ಆಫರ್ಗಳನ್ನು ತಿರಸ್ಕರಿಸಿ ಸ್ವಂತ ಉದ್ಯಮ ಆರಂಭಿಸಲು ನಿರ್ಧರಿಸಿದರು.
ತಾವು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಅಣಬೆ ಬೇಸಾಯವನ್ನೇ ಕಸುಬಾಗಿಸಿಕೊಳ್ಳಲು ಮುಂದಾದ ನಿಧಿ, 2017 ರಲ್ಲಿ ಕೇವಲ 3,000 ರೂಪಾಯಿ ಬಂಡವಾಳ ಹಾಕಿ 10 ಕೆಜಿ ಸಿಂಪಿ ಅಣಬೆ ಬೀಜಗಳೊಂದಿಗೆ ತಮ್ಮ ಮನೆಯ 10×10 ಅಡಿಯ ಸಣ್ಣ ಕೋಣೆಯಲ್ಲಿ ಕೃಷಿ ಆರಂಭಿಸಿದರು. ನಿರೀಕ್ಷೆಗೆ ತಕ್ಕಂತೆ ಮೊದಲಿಗೆ ಶೇಕಡಾ 30 ರಷ್ಟು ಇಳುವರಿ ಕಡಿಮೆಯಾದರೂ ಅವರು ಧೈರ್ಯ ಕಳೆದುಕೊಳ್ಳಲಿಲ್ಲ. ತಮ್ಮ 1,500 ಚದರ ಅಡಿಯ ಹಳೆಯ ಮನೆಯನ್ನೇ ಪ್ರಯೋಗಾಲಯವನ್ನಾಗಿ ಮಾರ್ಪಡಿಸಿಕೊಂಡು, ಆಧುನಿಕ ವಿಧಾನಗಳಲ್ಲಿ ಅಣಬೆ ಬೆಳೆಯಲು ತೊಡಗಿದರು.
ತಮ್ಮ ಅಣಬೆಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿರುವ ವಿಶೇಷ ತಳಿಯನ್ನು ಬೆಳೆಸಿದ ಅವರು, ಹಸಿ ಅಣಬೆಯನ್ನು ಕೆಜಿಗೆ 100 ರೂಪಾಯಿಯಂತೆ ಹಾಗೂ ಸೂರ್ಯನ ಬೆಳಕಿನಲ್ಲಿ ಒಣಗಿಸಿದ ಅಣಬೆಯನ್ನು ಕೆಜಿಗೆ 800 ರೂಪಾಯಿಯಂತೆ ಔಷಧೀಯ ಕಂಪನಿಗಳಿಗೆ ಮಾರಾಟ ಮಾಡಲು ಪ್ರಾರಂಭಿಸಿದರು. ಪ್ರಸ್ತುತ ಪ್ರತಿ ಎರಡು ತಿಂಗಳಿಗೊಮ್ಮೆ 150 ಕೆಜಿ ಅಣಬೆ ಉತ್ಪಾದಿಸುವುದರ ಜೊತೆಗೆ, ತಿಂಗಳಿಗೆ 1,000 ಕೆಜಿ ಅಣಬೆ ಬೀಜಗಳನ್ನು ತಯಾರಿಸಿ ಛತ್ತೀಸ್ಗಢ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಸುಮಾರು 150 ರೈತರಿಗೆ ಪೂರೈಸುತ್ತಿದ್ದಾರೆ. ಕೇವಲ ಅಣಬೆ ಮಾರಾಟಕ್ಕೆ ಸೀಮಿತವಾಗದೆ ಅಣಬೆ ಹಪ್ಪಳ, ಉಪ್ಪಿನಕಾಯಿ, ಬಿಸ್ಕೆಟ್ ಹಾಗೂ ಪ್ರೋಟೀನ್ ಪೌಡರ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಈ ಸಾಹಸದ ಹಾದಿಯಲ್ಲಿ ಅವರ ಪತಿ ಸಂಜಯ್ ಕಟಾರೆ ಅವರು ಖಾಸಗಿ ಕಂಪನಿಯಲ್ಲಿದ್ದ ತಮ್ಮ ಉನ್ನತ ಉದ್ಯೋಗವನ್ನು ತೊರೆದು ಪತ್ನಿಯ ಉದ್ಯಮದ ಮಾರುಕಟ್ಟೆ ವಿಸ್ತರಣೆಗೆ ಹೆಗಲುಕೊಟ್ಟರು. ದೆಹಲಿಯ ವ್ಯಾಪಾರಿಗಳಿಗೆ ಮನೆ-ಮನೆಗೆ ತೆರಳಿ ಅಣಬೆ ಮಾರಾಟ ಮಾಡುತ್ತಿದ್ದ ಸಂಜಯ್ ಅವರ ಶ್ರಮದಿಂದಾಗಿ ಇಂದು ಬೆಂಗಳೂರು, ಪುಣೆ, ಮುಂಬೈ, ಸೂರತ್ ಮುಂತಾದ ಪ್ರಮುಖ ನಗರಗಳಿಗೆ ಇವರ ಉತ್ಪನ್ನಗಳು ಸರಬರಾಜಾಗುತ್ತಿವೆ. ಬೋಧನೆಯ ಮೇಲಿನ ಪ್ರೀತಿಯಿಂದಾಗಿ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಜೀವವಿಜ್ಞಾನ ಪಾಠ ಮಾಡುವುದನ್ನು ಮುಂದುವರಿಸಿರುವ ನಿಧಿ ಕಟಾರೆ, ಸ್ವಂತ ಪರಿಶ್ರಮದಿಂದ ತಲೆ ಎತ್ತಿ ನಿಲ್ಲುವ ಮೂಲಕ ಇತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

