ಬೆಂಗಳೂರು: ನಮ್ಮ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರ ಕೊಟ್ಟು ಎಸ್‌ಐಆರ್ ಮಾಡಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಖಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ನಾಳೆಯಿಂದ ಎಸ್‌ಐಆರ್ ನಡೆಯಲಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಈ ಬಗ್ಗೆ ನಾವು ಕ್ಯಾಬಿನೆಟ್‌ನಲ್ಲಿ ಕೆಲವು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಮುಖ್ಯ ಚುನಾವಣಾಧಿಕಾರಿಗೂ ಆಕ್ಷೇಪ ಸಲ್ಲಿಸಲಾಗಿದೆ. ಯಾವ ಆಧಾರದಲ್ಲಿ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡ್ತಾರೆ? ಇದರ ಹಿಂದಿನ ತರ್ಕ ಏನು ಅಂತ ಆಯೋಗಕ್ಕೆ ಕೇಳಿದ್ದೇವೆ ಎಂದು ಮಾಹಿತಿ ನೀಡಿದರು.
ಗೊಂದಲ ಇದ್ದರೆ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲು ಅವಕಾಶ ಮಾಡಿಕೊಡಬೇಕು. ದಾಖಲೆಗಳಲ್ಲಿ ಸ್ಪೆಲ್ಲಿಂಗ್ ತಪ್ಪಾದ ಮಾತ್ರಕ್ಕೆ ಅವರ ಹಕ್ಕು ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಆಕ್ಷೇಪಕ್ಕೆ ಆಯೋಗದಿಂದ ಇನ್ನೂ ಉತ್ತರ ಸಿಕ್ಕಿಲ್ಲ. ನಾವು ಎಸ್‌ಐಆರ್ ಮಾಡಬೇಡಿ ಎಂದು ಹೇಳಿಲ್ಲ. ಉತ್ತಮವಾದ ವೋಟರ್ ಲಿಸ್ಟ್ ಕೊಡಲಿ. ಪಾರದರ್ಶಕವಾಗಿ ಮಾಡಲಿ ಎಂದರು.
ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಬಡವರ ಹಕ್ಕು ಕಿತ್ತುಕೊಳ್ಳಲಾಗಿದೆ. ನಾವು ಜಾಗೃತಿ ಅಭಿಯಾನ ಮಾಡ್ತಿದ್ದೇವೆ. ಕಾನೂನಾತ್ಮಕವಾಗಿ ಇದನ್ನು ಪರಿಗಣಿಸಬೇಕಾಗುತ್ತೆ. ಪಶ್ಚಿಮ ಬಂಗಾಳದಲ್ಲಿ 89 ಲಕ್ಷ ಜನರನ್ನು ಪಟ್ಟಿಯಿಂದ ಕೈಬಿಡ್ತಾರೆ. ನ್ಯಾಯಮಂಡಳಿಯಲ್ಲಿ ಕೇಳಲು ಅವಕಾಶ ಕೊಡಲ್ಲ. ಅವಕಾಶ ಕೇಳಿದ್ರೆ ಇದು ಮಾಡಲು ಆಗಲ್ಲ, ನಾಲ್ಕು ವರ್ಷಬೇಕು ಎಂದು ನ್ಯಾಯಮಂಡಳಿಯ ಜಡ್ಜ್ ರಾಜೀನಾಮೆ ಕೊಡ್ತಾರೆ ಎಂದರು.

