ಬೆಂಗಳೂರು: ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಇಂದು ನಡೆದ ‘ಗೃಹ ಸಚಿವರೊಂದಿಗೆ ಸಂವಾದ’ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 800ಕ್ಕೂ ಹೆಚ್ಚು ಪೊಲೀಸ್ ಕಾನ್ಸ್ ಟೇಬಲ್‌ಗಳು, ಹೆಡ್ ಕಾನ್ಸ್ ಟೇಬಲ್ ಗಳು, ಎಎಸ್‌ಐ ಹಾಗೂ ಎಸ್‌ಐಗಳೊಂದಿಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ನೇರವಾಗಿ ಸಂವಾದ ನಡೆಸಿದ್ದಾರೆ.
ಕರ್ತವ್ಯದ ಒತ್ತಡ, ಆರೋಗ್ಯ ಮತ್ತು ಮಾನಸಿಕ ಕ್ಷೇಮ, ವರ್ಗಾವಣೆ–ಬಡ್ತಿ, ಸೇವಾ ಮೌಲ್ಯಮಾಪನ, ಕುಟುಂಬ ಹಾಗೂ ಮಕ್ಕಳ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸೇರಿದಂತೆ ಸಿಬ್ಬಂದಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದ ಪ್ರಿಯಾಂಕ್ ಖರ್ಗೆ, ಮಾದಕ ವಸ್ತುಗಳ ವಿರುದ್ಧ ‘ಬೇಡ ಬ್ರೋ’ ಅಭಿಯಾನವನ್ನು ಮಿಷನ್ ಮೋಡ್‌ನಲ್ಲಿ ಮುನ್ನಡೆಸಬೇಕು. ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ಜಾಲವನ್ನು ಬುಡಸಮೇತ ಕಿತ್ತೊಗೆಯಬೇಕು. ರೌಡಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರೌಡಿಗಳೊಂದಿಗೆ ಯಾವುದೇ ರೀತಿಯ ಸ್ನೇಹ, ಮಾಹಿತಿ ಹಂಚಿಕೆ ಅಥವಾ ಪ್ರೋತ್ಸಾಹಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚುತ್ತಿರುವ ಸೈಬರ್ ಅಪರಾಧ, ಡಿಜಿಟಲ್ ಅರೆಸ್ಟ್, ಆರ್ಥಿಕ ವಂಚನೆ, ಸೈಬರ್ ಬುಲ್ಲಿಯಿಂಗ್ ಮತ್ತು ಸೆಕ್ಸ್‌ಟಾರ್ಷನ್ ಪ್ರಕರಣಗಳಿಗೆ ಪೊಲೀಸರು ತ್ವರಿತವಾಗಿ ಸ್ಪಂದಿಸಬೇಕು. ಮಹಿಳೆಯರ ಖಾಸಗಿ ಚಿತ್ರ ಅಥವಾ ವಿಡಿಯೋಗಳ ದುರ್ಬಳಕೆಯಂತಹ ಪ್ರಕರಣಗಳಲ್ಲಿ ಸಂವೇದನಾಶೀಲವಾಗಿ ಹಾಗೂ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಲು ಪ್ರತ್ಯೇಕ ಯೋಜನೆ ರೂಪಿಸಲಾಗುವುದು. ವರ್ಗಾವಣೆ, ಬಡ್ತಿ ಮತ್ತು ಸೇವಾ ಮೌಲ್ಯಮಾಪನದಲ್ಲಿ ಅಗತ್ಯ ಸುಧಾರಣೆ ತರಲಾಗುವುದು. ಸೇವಾವಧಿಯ ಜೊತೆಗೆ ಕಾರ್ಯಕ್ಷಮತೆಗೂ ಆದ್ಯತೆ ನೀಡಲಾಗುವುದು. ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಕ್ಕೆ ಅಗತ್ಯವಾದ ತರಬೇತಿಗೆ ವಿಶೇಷ ಗಮನ ನೀಡಲಾಗುವುದು. ಸ್ನೇಹಪರ ಪೊಲೀಸ್ ಠಾಣೆ ಎಂದರೆ ಕೇವಲ ಉತ್ತಮ ಕಟ್ಟಡವಲ್ಲ. ಸಾರ್ವಜನಿಕರೊಂದಿಗೆ ಮಾನವೀಯತೆ ಮತ್ತು ಗೌರವದಿಂದ ವರ್ತಿಸುವ ವ್ಯವಸ್ಥೆ ಎಂದು ಹೇಳಿದ್ದಾರೆ.
ಪೊಲೀಸ್ ಇಲಾಖೆ ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಂಸ್ಥೆ ಅಷ್ಟೇ ಅಲ್ಲದೇ, ಕರ್ನಾಟಕವನ್ನು ಸುರಕ್ಷಿತ, ಶಾಂತಿಯುತ ಹಾಗೂ ಹೂಡಿಕೆಗೆ ವಿಶ್ವಾಸಾರ್ಹ ತಾಣವನ್ನಾಗಿ ಮಾಡುವಲ್ಲಿ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದು. ಸಚಿವರು ಮತ್ತು ಅಧಿಕಾರಿಗಳು ಬಂದು ಹೋಗುತ್ತಾರೆ. ಆದರೆ ಪೊಲೀಸ್ ಸಿಬ್ಬಂದಿ ಜನರೊಂದಿಗೆ ನೇರವಾಗಿ ನಿಂತು ಸೇವೆ ಸಲ್ಲಿಸುವವರು. ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಇಲಾಖೆಯನ್ನು ಮತ್ತಷ್ಟು ಬಲಿಷ್ಠ, ಜನಸ್ನೇಹಿ ಮತ್ತು ಪರಿಣಾಮಕಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

