ಬೆಂಗಳೂರು: ಬೆಂಗಳೂರು ನಗರ ಎದುರಿಸುತ್ತಿರುವ ಹೆಚ್ಚುತ್ತಿರುವ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರೂಪಿಸಲಾಗಿರುವ ನಗರ ಸಂಚಾರ ಮಿಷನ್ನ ಪ್ರಗತಿ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪರಿಶೀಲನೆ ನಡೆಸಿದ್ದಾರೆ.
ಈ ಮಿಷನ್ನಲ್ಲಿ ರಾಜ್ಯದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು, ಖಾಸಗಿ ಸಾರಿಗೆ ಸೇವಾ ಸಂಸ್ಥೆಗಳು ಹಾಗೂ ನಾಗರಿಕರನ್ನು ಒಟ್ಟುಗೂಡಿಸಿ, ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಸಮಗ್ರ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಲಾಗಿದೆ.
ಅಧಿಕಾರಿಗಳು ಈಗಾಗಲೇ ಸಂಬಂಧಿಸಿದ ಪ್ರಮುಖ ಇಲಾಖೆಗಳು, ಸಂಸ್ಥೆಗಳು ಹಾಗೂ ಸಾರಿಗೆ ಸೇವಾ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಚರ್ಚೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಶೀಘ್ರದಲ್ಲೇ ನಗರ ಸಂಚಾರ ಮಿಷನ್ನ ಸಭೆ ಕರೆಯಲಾಗುವುದು.
ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿವಿಧ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ, ಮಾಹಿತಿಯ ಹಂಚಿಕೆ, ಪ್ರಯಾಣದ ಕೊನೆಯ ಹಂತದವರೆಗೂ ಸುಗಮ ಸಂಪರ್ಕ ವ್ಯವಸ್ಥೆ ಹಾಗೂ ತ್ವರಿತ ಮತ್ತು ಸಮನ್ವಯಿತ ಕ್ರಮಗಳಿಗೆ ಆದ್ಯತೆ ನೀಡಲಾಗುವುದು.
ಬೆಂಗಳೂರಿನ ಸಂಚಾರ ಸಮಸ್ಯೆಗೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಇಲಾಖೆಗಳು, ಸಂಸ್ಥೆಗಳು ಮತ್ತು ಸಾರಿಗೆ ಸೇವಾ ಪಾಲುದಾರರು ನಾಗರಿಕರನ್ನು ಕೇಂದ್ರದಲ್ಲಿರಿಸಿಕೊಂಡು, ಒಂದೇ ವ್ಯವಸ್ಥೆಯಾಗಿ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಲಾಗಿದೆ.
ಮಾದಕ ವಸ್ತು ವಿರೋಧಿ ಕಾರ್ಯಪಡೆ ಕಾರ್ಯನಿರ್ವಹಣೆ ಪ್ರಗತಿ ಪರಿಶೀಲನೆ
ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಆಂತರಿಕ ಭದ್ರತಾ ವಿಭಾಗ ಹಾಗೂ ಮಾದಕ ವಸ್ತು ವಿರೋಧಿ ಕಾರ್ಯಪಡೆಯ ಕಾರ್ಯನಿರ್ವಹಣೆ ಕುರಿತು ಗೃಹ ಸಚಿವರು ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ಆಂತರಿಕ ಭದ್ರತಾ ವಿಭಾಗದ ಐದು ಘಟಕಗಳಾದ ಭಯೋತ್ಪಾದನೆ ನಿಗ್ರಹ ದಳ, ಭಯೋತ್ಪಾದನೆ ಪ್ರತಿರೋಧ ಕೇಂದ್ರ, ಕರಾವಳಿ ಭದ್ರತಾ ಪೊಲೀಸ್, ನಕ್ಸಲ್ ವಿರೋಧಿ ಪಡೆ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಗಳ ಕಾರ್ಯವೈಖರಿಯನ್ನು ಪರಾಮರ್ಶಿಸಲಾಯಿತು.
ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಮಾದಕ ವಸ್ತು ವಿರೋಧಿ ಕಾರ್ಯಪಡೆ, ‘ರೈಸ್ ಕರ್ನಾಟಕ’ ಹಾಗೂ ‘ಬೇಡ ಬ್ರೋ’ ಅಭಿಯಾನದ ಪ್ರಗತಿಯನ್ನೂ ಪರಿಶೀಲಿಸಲಾಯಿತು.
ಕಳೆದ ಎರಡು ತಿಂಗಳಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಸೇರಿದಂತೆ ಸುಮಾರು 7,100 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಸುಮಾರು 6 ಲಕ್ಷ ವಿದ್ಯಾರ್ಥಿಗಳು ಹಾಗೂ 2 ಲಕ್ಷ ಸಾರ್ವಜನಿಕರನ್ನು ತಲುಪಲಾಗಿದೆ.
ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಕಠಿಣ ಕಾನೂನು ಕ್ರಮ, ಪರಿಣಾಮಕಾರಿ ತಡೆಗಟ್ಟುವಿಕೆ ಹಾಗೂ ರಾಜ್ಯಾದ್ಯಂತ ನಿರಂತರ ಜಾಗೃತಿ ನಮ್ಮ ಧ್ಯೇಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಅಕ್ರಮ ಪ್ಲಾಸ್ಟಿಕ್ ತಡೆಗೆ ಕ್ರಮ, ಜಿಲ್ಲಾಧಿಕಾರಿ ತಪಾಸಣೆ
ದಾವಣಗೆರೆ: ನಗರದ ಮಂಡಿಪೇಟೆಯಲ್ಲಿ ಸ್ಥಳೀಯ ವ್ಯಾಪಾರ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿರುವ ಪ್ಲಾಸ್ಟಿಕ್ ದಾಸ್ತಾನು ಹಾಗೂ ನಿಯಮಬಾಹಿರವಾಗಿ ಕಾರ್ಯಾಚರಿಸುತ್ತಿರುವ ಗೋಡೌನ್ಗಳ(ಗೋದಾಮು) ವಿರುದ್ಧ ತೀವ್ರ ತಪಾಸಣೆಯನ್ನು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಅವರು ನಡೆಸಿದರು.
ಪರಿಶೀಲನೆ ವೇಳೆ, ಗೋಡೌನ್ ಬೋರ್ಡ್ಗಳು ಎಲ್ಲಿವೆ ಹಾಗೂ ಅವು ಯಾರಿಗೆ ಸೇರಿವೆ ಎಂದು ಪ್ರಶ್ನಿಸಿದಾಗ, ಸ್ಥಳದಲ್ಲಿದ್ದ ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಸರಿಯಾದ ಮಾಹಿತಿ ನೀಡದೆ ಸುಳ್ಳು ಹೇಳಲು ಯತ್ನಿಸಿದರು. “ನನ್ನ ಬಳಿ ನೇರವಾಗಿ ಉತ್ತರ ಹೇಳಿ, ವಿಷಯ ಮುಚ್ಚಿಡಲು ನೋಡಿದರೆ ನಿಮ್ಮ ಮೇಲೆಯೇ ಪರಿಣಾಮ ಬೀರುತ್ತದೆ” ಎಂದು ಎಚ್ಚರಿಸಿದರು.
ಎಲ್ಲಾ ಅಕ್ರಮ ಗೋಡೌನ್ಗಳನ್ನು ತಕ್ಷಣವೇ ಪರಿಶೀಲಿಸಿ, ಅವುಗಳನ್ನು ಲಾಕ್ ಮತ್ತು ಸೀಲ್ ಮಾಡಿ ಎಂದು ಸ್ಥಳದಲ್ಲಿದ್ದ ಸಿಬ್ಬಂದಿಗೆ ಖಡಕ್ ನಿರ್ದೇಶನ ನೀಡಿದರು.
ಸಾರ್ವಜನಿಕರ ಆರೋಗ್ಯ ಮತ್ತು ನಿಯಮಾವಳಿಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಪ್ಲಾಸ್ಟಿಕ್ ದಾಸ್ತುನು ಮೇಲೆ ತಕ್ಷಣ ಕ್ರಮ ಕೈಗೊಂಡು ಎಫ್ಐಆರ್ (FIR) ದಾಖಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ ಅವರಿಗೆ ಸೂಚನೆ ನೀಡಿದರು.
ತಪಾಸಣೆ ವೇಳೆ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

