HomeLatest Newsಇಂದು ದೇಶದ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಿ ಮೋದಿ ಚಾಲನೆ .! ವಿಶೇಷತೆಗಳೇನು ಗೊತ್ತಾ?

ಇಂದು ದೇಶದ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಿ ಮೋದಿ ಚಾಲನೆ .! ವಿಶೇಷತೆಗಳೇನು ಗೊತ್ತಾ?

ಭಾರತೀಯ ರೈಲ್ವೆ ಇತಿಹಾಸದಲ್ಲಿ ಇಂದು ಹೊಸ ಮೈಲುಗಲ್ಲು ನಿರ್ಮಾಣವಾಗಲಿದೆ. ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲು ಇಂದು ಮೊದಲ ಬಾರಿಗೆ ಹಳಿಗೆ ಇಳಿಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವತಃ ಈ ರೈಲಿಗೆ ಹಸಿರು ನಿಶಾನೆ ತೋರಲಿದ್ದು, ದೇಶದ ರೈಲ್ವೆ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಸಾರಿಗೆಗೆ ಹೊಸ ದಿಕ್ಕು ನೀಡಲಿದ್ದಾರೆ.

ಪ್ರಧಾನಿ ಮೋದಿ ಅವರು ಇಂದು ಹರಿಯಾಣ, ಪಂಜಾಬ್ ಹಾಗೂ ಚಂಡೀಗಢ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡಿದ್ದು, ಒಟ್ಟು ₹26,800 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಹರಿಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೇಶದ ಮೊದಲ ಹೈಡ್ರೋಜನ್ ರೈಲನ್ನು ಉದ್ಘಾಟಿಸಲಿದ್ದಾರೆ.

ಈ ರೈಲು ಜಿಂದ್–ಸೋನಿಪತ್ ಮಾರ್ಗದಲ್ಲಿ ಸಂಚರಿಸಲಿದೆ. ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾದ ಈ ರೈಲು ಪರಿಸರ ಸ್ನೇಹಿಯಾಗಿದ್ದು, ಇದರಿಂದ ಯಾವುದೇ ಹಾನಿಕಾರಕ ಹೊಗೆ ಹೊರಬರುವುದಿಲ್ಲ. ಹೀಗಾಗಿ ಕಾರ್ಬನ್ ಉತ್ಸರ್ಜನೆ ಕಡಿಮೆಯಾಗುವ ಮೂಲಕ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಹೈಡ್ರೋಜನ್ ರೈಲುಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪರಿಚಯಿಸುವ ಯೋಜನೆಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ಹೊಸ ರೈಲು ಸೇವೆಗಳಿಗೂ ಚಾಲನೆ

ಈ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಕುರಕ್ಷೇತ್ರದಲ್ಲಿ ಸಿಖ್ ಮ್ಯೂಸಿಯಂಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಚಂಡೀಗಢದಲ್ಲಿ ₹6,600 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವುದರ ಜೊತೆಗೆ, ಪಿಜಿಐಎಂಇಆರ್‌ನಲ್ಲಿ ಹೊಸ ವೈದ್ಯಕೀಯ ಕೇಂದ್ರಗಳನ್ನು ಆರಂಭಿಸಲಿದ್ದಾರೆ.

ಇದರೊಂದಿಗೆ ದೆಹಲಿ–ಅಮೃತಸರ–ಕತ್ರಾ ಎಕ್ಸ್‌ಪ್ರೆಸ್ ಹೆದ್ದಾರಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದು, 75 ಅಮೃತ್ ಭಾರತ್ ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿದ್ದಾರೆ. ಆಂಧ್ರ ಪ್ರದೇಶದ ಮಂಗಳಗಿರಿ, ರಾಯನಪಾಡು ಮತ್ತು ಕಂಬಂ ರೈಲು ನಿಲ್ದಾಣಗಳಿಗೂ ಚಾಲನೆ ನೀಡಲಿದ್ದಾರೆ. ಜೊತೆಗೆ ಕೈಥಲ್–ಅಂಬಾಲಾ ಹಾಗೂ ಅಮೃತಸರ (ಛೆಹರ್ತಾ)–ವಾರಾಣಸಿ ನಡುವಿನ ಹೊಸ ರೈಲು ಸೇವೆಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ.

ಹೈಡ್ರೋಜನ್ ರೈಲಿನ ಪ್ರಮುಖ ವಿಶೇಷತೆಗಳು

  • ಜಿಂದ್–ಸೋನಿಪತ್ ನಡುವೆ ಪ್ರತಿದಿನ ಎರಡು ರೌಂಡ್ ಟ್ರಿಪ್ ನಡೆಸಲಿದೆ.
  • ದಿನಕ್ಕೆ ಸುಮಾರು 356 ಕಿ.ಮೀ. ಸಂಚರಿಸಲಿದೆ.
  • ಗಂಟೆಗೆ 75 ರಿಂದ 120 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.
  • ಜಿಂದ್ ಸಿಟಿ, ಪಾಂಡು ಪಿಂಡಾರ, ಲಲಿತ್ ಖೇರಾ, ಭಂಬೇವಾ, ಇಶಾಪುರ ಖೇರಿ, ಬುಟಾನಾ, ಖಂಡ್ರಾಯ್, ಗೊಹಾನಾ, ರಭ್ರಾ, ಲಾತ್, ಮೊಹಾನಾ (ಹರಿಯಾಣ), ಬರ್ವಾಸ್ನಿ ಮತ್ತು ಸೋನಿಪತ್ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.
  • ರೈಲಿನಲ್ಲಿ 2 ಡ್ರೈವಿಂಗ್ ಪವರ್ ಕಾರುಗಳು ಹಾಗೂ 8 ಪ್ರಯಾಣಿಕರ ಬೋಗಿಗಳು ಸೇರಿ ಒಟ್ಟು 10 ಬೋಗಿಗಳಿವೆ.
  • ಒಂದೇ ಸಮಯದಲ್ಲಿ ಸುಮಾರು 2,600 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.
  • ಬೋಗಿಗಳು ಆಧುನಿಕ ಹಾಗೂ ಆರಾಮದಾಯಕವಾಗಿದ್ದರೂ, ಎಲ್ಲವೂ ನಾನ್-ಎಸಿ ಕೋಚ್‌ಗಳಾಗಿವೆ.

ವಿಶ್ವದಲ್ಲೇ ಅತಿ ಉದ್ದದ ಹೈಡ್ರೋಜನ್ ರೈಲು

ಜರ್ಮನಿ ಸೇರಿದಂತೆ ಕೆಲವು ದೇಶಗಳಲ್ಲಿ ಈಗಾಗಲೇ ಹೈಡ್ರೋಜನ್ ರೈಲುಗಳು ಸಂಚರಿಸುತ್ತಿದ್ದರೂ, ಇಷ್ಟು ಉದ್ದದ ಹೈಡ್ರೋಜನ್ ರೈಲು ವಿಶ್ವದಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಆರಂಭವಾಗುತ್ತಿದೆ. ಇದರಿಂದ ವಿಶ್ವದ ಅತಿ ಉದ್ದದ ಹೈಡ್ರೋಜನ್ ರೈಲನ್ನು ಆರಂಭಿಸಿದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಪರಿಸರ ಸ್ನೇಹಿ ತಂತ್ರಜ್ಞಾನ, ಸ್ವದೇಶಿ ನಿರ್ಮಾಣ ಮತ್ತು ಆಧುನಿಕ ರೈಲು ಸೇವೆಗಳ ಮೂಲಕ ಭಾರತೀಯ ರೈಲ್ವೆ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದು, ಇದು ದೇಶದ ಸಾರಿಗೆ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular