ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬೇಡ ಎಂದು ಹೇಳುತ್ತಿರುವ ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಕಾಂಗ್ರೆಸ್‌ಗೆ ಹೋಗುತ್ತಿದ್ದಾರೆ?. ಹೌದು, 2028ರ ಚುನಾವಣೆಯಲ್ಲಿ ಮೈತ್ರಿ ಧರ್ಮದ ಕಾರಣಕ್ಕೆ ಟಿಕೆಟ್ ತಪ್ಪುವ ಭೀತಿಯಲ್ಲಿ ಅವರು ಪಕ್ಷಾಂತರ ಮಾಡಲಿದ್ದಾರೆ.
ಹೌದು, ಜೆಡಿಎಸ್–ಬಿಜೆಪಿ ಮೈತ್ರಿಯ ಕಾರಣಕ್ಕೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಸಿಗದೇ ಇರುವ ಆತಂಕವನ್ನು ಪ್ರೀತಂ ಗೌಡ ಎದುರಿಸುತ್ತಿದ್ದಾರೆ. ಆದ್ದರಿಂದ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆಗಿರುವ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹಬ್ಬಿದೆ.
ಈ ಕುರಿತು ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಹೇಳಿಕೆ ನೀಡಿದ್ದು, “ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಟಿಕೆಟ್ ವಂಚಿತರಾಗುವ ಭಯದಿಂದಲೇ ಮಾಜಿ ಶಾಸಕ ಪ್ರೀತಂಗೌಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ” ಎಂದರು.
“ಅವರು ಒಂದು ಕಾಲು ಬಿಜೆಪಿ ಮತ್ತೊಂದು ಕಾಲು ಕಾಂಗ್ರೆಸ್ ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ. ಜೆಡಿಎಸ್–ಬಿಜೆಪಿ ಮೈತ್ರಿ ಇದ್ದಾಗಲೂ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದಾರೆ” ಎಂದು ಆರೋಪಿಸಿದರು.
“ಪ್ರೀತಂಗೌಡರು ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್ ಪಕ್ಷದಲ್ಲಿ ಇಟ್ಟಿದ್ದಾರೆ. ಮೈತ್ರಿ ಧರ್ಮ ಪಾಲನೆಯಲ್ಲಿ ಹಾಸನ ಜೆಡಿಎಸ್‌ಗೆ ಹೋದರೆ, ಪ್ರೀತಂಗೌಡ ಅವರಿಗೆ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್‌ನಿಂದಲೇ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ” ಎಂದು ಭವಿಷ್ಯ ನುಡಿದಿರು.
ಜೆಡಿಎಸ್ ಕೋಟೆಗೆ ಲಗ್ಗೆ: 2018ರ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಹಾಸನಕ್ಕೆ ಲಗ್ಗೆ ಹಾಕಿದ್ದ ಬಿಜೆಪಿ ನಾಯಕ ಪ್ರೀತಂ ಗೌಡ ಹಾಸನ ಕ್ಷೇತ್ರದಲ್ಲಿ 63,348 ಮತಗಳನ್ನು ಪಡೆಯುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು.
2023ರ ಚುನಾವಣೆಯಲ್ಲಿಯೂ ಅವರು ಟಿಕೆಟ್ ಪಡೆದರು. ಆದರೆ 77,322 ಮತಗಳನ್ನು ಪಡೆದು ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ವಿರುದ್ಧ ಸೋಲು ಕಂಡರು. ಬಳಿಕ 2024ರ ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿದೆ.
2028ರ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆದರೆ ಹಾಸನ ಕ್ಷೇತ್ರ ಜೆಡಿಎಸ್ ಪಾಲಾಗಲಿದೆ. ಆಗ ಪ್ರೀತಂಗೌಡರ ರಾಜಕೀಯ ನಡೆ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜೆಡಿಎಸ್ ನಾಯಕರನ್ನು ಎದುರುಹಾಕಿಕೊಳ್ಳುವ ಒಬ್ಬ ಸಮರ್ಥ ನಾಯಕ ಬೇಕಿದೆ. ಆದ್ದರಿಂದ ಪ್ರೀತಂ ಗೌಡ ಕಾಂಗ್ರೆಸ್‌ಗೆ ಬಂದರೆ ಅವರನ್ನು ಸ್ವಾಗತಿಸುವ ಸಾಧ್ಯತೆಯೂ ಹೆಚ್ಚಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಬೇಡ ಎಂಬ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ನಿಖಿಲ್ ಕುಮಾರಸ್ವಾಮಿ, ‘ನಮ್ಮಲ್ಲಿರುವಂತೆ ಶಿಸ್ತುಪಾಲನಾ ಸಮಿತಿ ಬಿಜೆಪಿಯಲ್ಲೂ ಇದೆ. ಪಕ್ಷದ ವಿರುದ್ಧ ಅಶಿಸ್ತು ತೋರುವವರಿಗೆ, ಬೀದಿ ರಂಪಾಟ ಮಾಡುವವರಿಗೆ ಶಿಸ್ತು ಸಮಿತಿ ತಿದ್ದಿ, ಬುದ್ಧಿ ಹೇಳಲಿದೆ ಅಂದುಕೊಂಡಿದ್ದೇನೆ” ಎಂದು ತಿರುಗೇಟು ನೀಡಿದ್ದರು.

