ಬಾಗಲಕೋಟೆ: ರಾಜ್ಯದಲ್ಲಿ ಉಪಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮತ್ತೊಂದೆಡೆ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿರುವ ರಾಜಕೀಯ ಪಕ್ಷಗಳ ನಾಯಕರು ಚುನಾವಣಾ ಪ್ರಚಾರದ ಬರದಲ್ಲಿ ನಾಲಿಗೆಗಳನ್ನು ಹರಿಬಿಡುತ್ತಿದ್ದಾರೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಐಹೊಳೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚಿರಂತಿಮಠ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಯುಗಾದಿ ಹಬ್ಬದಂದೂ ಮಾಂಸ ತಿಂತೀನಿ ಅಂತಾರೆ. ಸಿದ್ರಾಮಣ್ಣ ನೀನು ಮಾಂಸನಾದ್ರೂ ತಿನ್ನು, ಸುನ್ನತ್ ಆದರೂ ಮಾಡಿಕೋ, ಏನ್ಬೇಕಾದರೂ ಮಾಡು ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ನೀನು ಯುಗಾದಿ, ದೀಪಾವಳಿ ಹಬ್ಬಕ್ಕೆ ಮಾಂಸ ತಿಂತೀನಿ ಅಂದರೆ 15% ಮುಸ್ಲಿಮರನ್ನು ಓಲೈಸಲು ಹಿಂದೂಗಳ ಭಾವನೆಗೆ ಧಕ್ಕೆ ತಂದಂತೆ. 85% ಹಿಂದೂಗಳಿದ್ದರೂ ಹರಿದು ಹಂಚಿ ಹೋಗಿದ್ದಾರೆ. ಗೌಡ, ಲಿಂಗಾಯತ, ಕುರುಬ, ವಾಲ್ಮೀಕಿ, ದಲಿತರು ವಿಭಜನೆಯಾಗಿದೆ. ಹಿಂದೂಗಳು ಉಳಿಯಬೇಕು ಅಂದ್ರೆ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದ್ದಾರೆ. ಪ್ರತಾಪ್ ಸಿಂಹ ಏಕವಚನದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪದಬಳಕೆ ಮಾಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

