ಮೈಸೂರು: ಪೊಲೀಸ್ ಅಧಿಕಾರಿಗೆ ನಿಂದನೆ ಪ್ರಕರಣದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಕೇಸು ದಾಖಲಾಗಿದೆ.
ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಮತ್ತು ಪೋಲಿಸ್ ಅಧಿಕಾರಿಯೊಬ್ಬರಿಗೆ ಜಾತಿನಿಂದನೆ, ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರತಾಪ್ ಸಿಂಹ ವಿರುದ್ಧ ಮೈಸೂರು ಜಿಲ್ಲೆ, ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
ಟಿ ನರಸೀಪುರ ತಾಲೂಕಿನ ಕೈಯಂಬಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಕ್ರೀಡಾ ಕಲಾ ಸಂಘದ ಅಧ್ಯಕ್ಷ ಕೆ.ಟಿ. ಮಧು ಪೊಲೀಸರಿಗೆ ದೂರು ನೀಡಿದ್ದಾರೆ. ಟಿ. ನರಸೀಪುರ ಪೊಲೀಸ್ ಠಾಣೆ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನಾ ಶೋಭಾಯಾತ್ರೆಯ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು ಸಾರ್ವಜನಿಕವಾಗಿ ಮಾಧ್ಯಮಗಳ ಎದುರು ಈ ವಿವಾದಾತ್ಮಕ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ದೂರು ಸ್ವೀಕರಿಸಿದ ಪೊಲೀಸರು ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 352, ಕ್ರಿಮಿನಲ್ ಮಾನನಷ್ಟ 356, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಎರಡನೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ತವ್ಯನಿರತ ಪೊಲೀಸ ಅಧಿಕಾರಿಯೊಬ್ಬರ ಜಾತಿ ಪ್ರಸ್ತಾಪಿಸಿ ಪರಿಶಿಷ್ಟ ಜಾತಿಗೆ ಸೇರಿದ ಧನಂಜಯ ಎಂಬ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಅವಹೇಳನಕಾರಿಯಾಗಿ ಪ್ರತಾಪ್ ಸಿಂಹ ಮಾತನಾಡಿದ್ದಾರೆ. ನಿಮ್ಮ ಜಾತಿಯ ಅಧಿಕಾರಿ ಎಂಬ ಒಂದೇ ಕಾರಣಕ್ಕೆ ಅವರನ್ನು ಬೆಂಬಲಿಸುತ್ತೀರಿ ಆತ ಕಳಪೆ ವ್ಯಕ್ತಿತ್ವದ ಇನ್ಸ್ಪೆಕ್ಟರ್ ಎಂದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿ ಸಾರ್ವಜನಿಕ ಶಾಂತಿ ಭಂಗ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ಪ್ರತಾಪ್ ಸಿಂಹ ಅವರು ತಮ್ಮ ಭಾಷಣದಲ್ಲಿ ಕೇವಲ ನೀಲಿ ಶಾಲು ಹಾಕಿಕೊಂಡು ಉದರ ನಿಮಿತ್ತವಾಗಿ ಬಂದು ನಿಲ್ಲುತ್ತೀರಿ. ನಿಮಗೆ ಅಂಬೇಡ್ಕರ್ ಅವರ ಬಗ್ಗೆ ಏನೂ ಗೊತ್ತಿಲ್ಲ. ಮೊದಲು ಅಂಬೇಡ್ಕರ್ ಅವರನ್ನು ಓದಿಕೊಳ್ಳಿ ಎಂದು ನಿಂದಿಸಿದ್ದಾರೆ. ಶೋಷಿತರ ಹಕ್ಕುಗಳಾಗಿ ಹೋರಾಡುವ ಸಂಘಟನೆಯ ಪದಾಧಿಕಾರಿಗಳನ್ನು ಹಣಕ್ಕಾಗಿ ಮತ್ತು ವೈಯಕ್ತಿಕ ಲಾಭಕ್ಕಾಗಿ ಹೋರಾಟ ಮಾಡುವವರು ಎಂದು ಸುಳ್ಳು ಆರೋಪ ಹೊರಿಸಿ ಪ್ರತಾಪ್ ಸಿಂಹ ಜಾತಿ ನಿಂದನೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಪ್ರತಾಪ್ ಸಿಂಹ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಲು ಆಗ್ರಹ
ಹಾಸನ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಲಾಗಿದೆ.
ಟಿ ನರಸೀಪುರದಲ್ಲಿ ಗಣೇಶ ಮೆರವಣಿಗೆ ವಿವಾದವನ್ನು ರಾಜಕೀಯ ಹಿತಾಸಕ್ತಿಗೆ ಬಳಸಿಕೊಂಡು ಸಮಾಜದಲ್ಲಿ ದ್ವೇಷದ ಭಾವನೆ ಮೂಡಲು ಕಾರಣವಾಗಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಹಾಸನ ಜಿಲ್ಲಾಧಿಕಾರಿ ಕಚೇರಿಯ ಎದುರು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳು ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುವಂತಿರಬೇಕು. ಆದರೆ ಪ್ರತಾಪ್ ಸಿಂಹ ಒಂದು ಧರ್ಮ ಮತ್ತು ಜಾತಿಯನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ 52 ವರ್ಷಗಳಿಂದ ಸಂವಿಧಾನದ ಆಶಯದಂತೆ ದೀನದಲಿತರ ಪರವಾಗಿ ಹೋರಾಟ ನಡೆಸುತ್ತಿದೆ. ಸಂಘಟನೆಯ ಕಾರ್ಯಕರ್ತರನ್ನು ಅವಹೇಳನಕಾರಿಯಾಗಿ ಪ್ರತಾಪ್ ಸಿಂಹ ನಿಂದಿಸಿದ್ದಾರೆ. ಕಾರ್ಯಕರ್ತರು ಧರಿಸುವ ನೀಲಿ ಶಾಲಿನ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಾಪ್ ಸಿಂಹ ವಿರುದ್ಧ ಐದಾರು ವರ್ಷಗಳಲ್ಲಿ ದ್ವೇಷ ಭಾಷಣ ಸೇರಿ 22 ಪ್ರಕರಣ ದಾಖಲಾಗಿವೆ. ಸಮಾಜದಲ್ಲಿ ಶಾಂತಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಅವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಲಾಗಿದೆ.

