ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದ ಪ್ರಜಾಸೇವೆ ಇಲಾಖೆಗೆ ರಾಜ್ಯದಲ್ಲಿ ಇಂದು ಚಾಲನೆ ಸಿಗಲಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ಜನರ ಕುಂದು ಕೊರತೆ ಆಲಿಸುವ ಉದ್ದೇಶದಿಂದ ಈ ಇಲಾಖೆಯನ್ನು ಆರಂಭಿಸಲಾಗಿದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ರಾಜ್ಯದ ಎಲ್ಲಾ ಜಿಲ್ಲೆ ತಾಲೂಕು ಹೋಬಳಿ ಮಟ್ಟದಲ್ಲಿ ಪ್ರಜಾಸೇವೆ ಆಂದೋಲನ ಸಭೆಗಳು ನಡೆಯಲಿವೆ. ಜನರಿಂದ ಅಹವಾಲುಗಳನ್ನು ಆಲಿಸಿ ಪರಿಹಾರ ಒದಗಿಸುವ ಉದ್ದೇಶ ಹೊಂದಲಾಗಿದೆ.
ಸಿಎಂ ಡಿ.ಕೆ. ಶಿವಕುಮಾರ್ ಕೂಡ್ಲಿಗಿಯಲ್ಲಿ ಪ್ರಜಾಸೇವೆ ಇಲಾಖೆಗೆ ಚಾಲನೆ ನೀಡಲಿದ್ದಾರೆ. ನಂತರದಲ್ಲಿ ಆಯಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಪ್ರಜಾಸೇವಾ ಆಂದೋಲನ ಸಭೆಗಳ ಮೂಲಕ ಚಾಲನೆ ನೀಡಲಿದ್ದಾರೆ.
ಜನತೆಯ ಸಂಕಷ್ಟಕ್ಕೆ ಕಿವಿಯಾಗಲು ಪ್ರಜೆಗಳ ಮನೆ ಬಾಗಿಲಿಗೆ ಪ್ರಜಾಸೇವಾ ಇಲಾಖೆ
ಜನರ ಸೇವೆಯೇ ಜನಾರ್ದನ ಸೇವೆ ಎಂಬ ತತ್ವದಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪ್ರಜಾಸೇವಾ ಇಲಾಖೆಯನ್ನು ಹೊಸದಾಗಿ ಪರಿಚಯಿಸುವ ಮೂಲಕ ಸರ್ಕಾರವನ್ನೇ ರಾಜ್ಯದ ಜನಸಾಮಾನ್ಯರ ಮನೆ-ಬಾಗಿಲಿಗೆ ಕೊಂಡೊಯ್ದು, ಅವರ ದುಃಖ-ದುಮ್ಮಾನ, ದೂರು, ನೋವುಗಳಿಗೆ ಕಾನೂನಿನ ಚೌಕಟ್ಟಿನಡಿ ಸ್ಥಳದಲ್ಲೇ ಸೂಕ್ತ ಪರಿಹಾರ ಕಲ್ಪಿಸುವ ಜನಸ್ನೇಹಿ ಆಡಳಿತಕ್ಕೆ ಹೊಸ ಆಂದೋಲನವನ್ನೇ ಆರಂಭಿಸಿದ್ದು, ರಾಜ್ಯದ ಜನತೆಯಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಹಾಗಾಗಿ ರಾಜ್ಯದ ಜನತೆಯ ಕುಂದು-ಕೊರತೆಗಳನ್ನು ಸ್ಥಳದಲ್ಲೇ ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹೊಸದಾಗಿ ಪ್ರಜಾಸೇವಾ ಇಲಾಖೆ ರಚಿಸಿ, ಸರ್ಕಾರ ಸುತ್ತೋಲೆ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಹೊಸ ಸೆಕೆ ಆರಂಭಿಸುವ ಮೂಲಕ ರಾಜ್ಯದ ಪ್ರಜೆಗಳಲ್ಲಿ ಹೊಸ ಹುರುಪು ತುಂಬಿದ್ದು, ರಾಜ್ಯದ ಪ್ರತಿಯೊಬ್ಬರೂ ಸರ್ಕಾರದತ್ತ ತಿರುಗಿ ನೋಡುವಂತಾಗಿದೆ.
ಜನರ ಅಹವಾಲುಗಳನ್ನು ಆಲಿಸಿ, ಅವರ ಮನೆ ಬಾಗಿಲಿನಲ್ಲಿಯೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಆಯೋಜಿಸಲಾಗುವುದು. ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸೂಕ್ತ ಸಮಾಧಾನದ ಪರಿಹಾರ ಕೊಡಿಸಲಾಗುವುದು.
ಪ್ರಜಾಸೇವಾ ಸಭೆಗಳ ಸಂದರ್ಭದಲ್ಲಿ ನಾಗರೀಕರಿಂದ ಸ್ವೀಕರಿಸಲಾಗುವ ಅರ್ಜಿಗಳು ಮತ್ತು ದೂರುಗಳನ್ನು ಪ್ರತಿ ಸಭಾ ಸ್ಥಳದಲ್ಲಿ ಸ್ಥಾಪಿಸಲಾಗುವ ಗ್ರಾಮ ಒನ್ ಮತ್ತು ಕರ್ನಾಟಕ ಒನ್‌ಕೇಂದ್ರಗಳ ಮೂಲಕ ನಿರ್ವಹಿಸಲು ಜಿಲ್ಲಾಡಳಿತದ ವತಿಯಿಂದ ಕ್ರಮವಹಿಸಲಾಗುತ್ತಿದೆ.
ಪ್ರಜಾಸೇವೆ ಆಂದೋಲನ: ಸರ್ಕಾರದ ಸುತ್ತೋಲೆಯನುಸಾರ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರತಿ ತಿಂಗಳ ಎಲ್ಲಾ ಶನಿವಾರದಂದು ಪ್ರಜಾಸೇವೆ ಅಂದೋಲನ ಸಭೆ ಆಯೋಜಿಸಲಾಗುವುದು. ಪ್ರತಿ ತಿಂಗಳ ಎಲ್ಲಾ ಶನಿವಾರದಂದು 2ನೇ ಹಾಗೂ 4ನೇ ಶನಿವಾರ ಸೇರಿದಂತೆ) ಕಡ್ಡಾಯವಾಗಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ಆಯೋಜಿಸಲು ಆಯಾ ಜಿಲ್ಲಾಧಿಕಾರಿಗಳು ಕ್ರಮವಹಿಸಲು ಸರ್ಕಾರ ನಿರ್ದೇಶನ ನೀಡಿದೆ.
ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆ ಮತ್ತು ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಗಳನ್ನು ನಡೆಸಬೇಕು. ಈ ಸಭೆಗಳನ್ನು ಮೊದಲಿಗೆ ಎಲ್ಲಾ ತಾಲ್ಲೂಕು ಕೇಂದ್ರಸ್ಥಾನಗಳಲ್ಲಿ ನಡೆಸಿ ನಂತರ ಎಲ್ಲಾ ಹೋಬಳಿ ಕೇಂದ್ರ ಸ್ಥಾನದ ಗ್ರಾಮಗಳಿಗೆ ಕೊಂಡೊಯ್ಯಬಹುದಾಗಿದೆ.
ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಗಳನ್ನು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಮೊದಲು ಎಲ್ಲಾ ಹೋಬಳಿ ಕೇಂದ್ರ ಸ್ಥಾನದ ಗ್ರಾಮಗಳಲ್ಲಿ ನಂತರ ಗ್ರಾಮ ಪಂಚಾಯತ್ ಕೇಂದ್ರ ಸ್ಥಾನ ಇರುವ ಗ್ರಾಮಗಳಲ್ಲಿ ನಡೆಸಲು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.
ಅಧಿಕಾರಿಗಳ ಭಾಗವಹಿಸುವಿಕೆ ಕಡ್ಡಾಯ: ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್, ಅಧೀಕ್ಷಕರು/ಆಯುಕ್ತರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು(ವನ್ಯಜೀವಿ ವಿಭಾಗದವರು ಒಳಗೊಂಡಂತೆ) ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಮೇಲ್ಕಂಡ ತಾಲ್ಲೂಕು ಮಟ್ಟದ ಪ್ರಜಾಸೇವ ಆಂದೋಲನ ಸಭೆಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಅದೇ ರೀತಿ ವಿಧಾನಸಭಾ ಕ್ಷೇತ್ರವಾರು ಪ್ರತಿ ತಿಂಗಳ ಎಲ್ಲಾ ಶನಿವಾರದಂದು (2ನೇ ಹಾಗೂ 4ನೇ ಶನಿವಾರ ಸೇರಿದಂತೆ) ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಗಳನ್ನು ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳು ಆಯೋಜಿಸಬೇಕು.
ತಹಶೀಲ್ದಾರ್, ಪೊಲೀಸ್ ಉಪಾಧೀಕ್ಷಕರು/ಸಹಾಯಕ ಪೊಲೀಸ್ ಆಯುಕ್ತರು, ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿರವರು ಒಳಗೊಂಡಂತೆ) ಸೇರಿದಂತೆ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಮೇಲ್ಕಂಡ ಹೋಬಳಿ ಮಟ್ಟದ -ಪ್ರಜಾಸೇವೆ ಆಂದೋಲನ ಸಭೆಗಳಲ್ಲಿ ಭಾಗವಹಿಸಬೇಕು.
ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪ್ರಜಾಸೇವೆ ಅಂದೋಲನ ಸಭೆಗಳು ನಡೆಯುವ ದಿನಗಳಲ್ಲಿ ಇಲಾಖೆಗಳು ಇತರೆ ಯಾವುದೇ ಸಭೆಗಳನ್ನು ನಿಗದಿಪಡಿಸುವಂತಿಲ್ಲ ಮತ್ತು ಯಾವುದೇ ಕಾರಣಕ್ಕೂ ಪ್ರಜಾಸೇವೆ ಆಂದೋಲನ ಸಭೆಗಳನ್ನು ತಪ್ಪಿಸುವಂತಿಲ್ಲ. ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ಆಯೋಜನೆಗೊಂಡಾಗ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸ್ಥಳೀಯ ಶಾಸಕರು ಸಹ ಭಾಗವಹಿಸುವ ಹಿನ್ನಲೆಯಲ್ಲಿ ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆ ಶನಿವಾರದಂದು ಪ್ರತ್ಯೇಕವಾದ ಹೋಬಳಿ ಮಟ್ಟದ ಪ್ರಜಾಸೇವ ಆಂದೋಲನ ಸಭೆಯನ್ನು ಆಯೋಚಿಸುವಂತಿಲ್ಲ. ಆದರೆ, ಈ ಸಭೆಯಲ್ಲಿ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಹ ಭಾಗವಹಿಸುವುದು ಕಡ್ಡಾಯವಾಗಿದೆ.
ಮುಂಗಡ ವೇಳಾಪಟ್ಟಿ ನಿಗದಿ: ಜಿಲ್ಲಾಧಿಕಾರಿಗಳು ಒಂದು ತಿಂಗಳ ಮುಂಚಿತವಾಗಿ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಿ, ಪತ್ರಿಕಾ ಪ್ರಕಟಣೆ ಸೇರಿದಂತೆ ಎಲ್ಲಾ ಸರ್ಕಾರಿ ಕಛೇರಿಗಳ ಸೂಚನಾ ಫಲಕದಲ್ಲಿ ಪ್ರದರ್ಶಿಸುವ ಮೂಲಕ ವ್ಯಾಪಕ ಪ್ರಚಾರ ಮಾಡಲು ಕ್ರಮವಹಿಸಲು ಸರ್ಕಾರ ಸೂಚಿಸಿದೆ.
ಉಸ್ತುವಾರಿ ಸಚಿವರಿಗೂ ಮುಂಗಡ ಮಾಹಿತಿ: ಪ್ರಜಾಸೇವೆ ಆಂದೋಲನ ಸಭೆಗಳ ವೇಳಾಪಟ್ಟಿಯ ವಿವರಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಸೇರಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮುಂಚಿತವಾಗಿ ಜಿಲ್ಲಾಧಿಕಾರಿಗಳು ತಿಳಿಸಬೇಕು.
ಮನೆ-ಮನೆಗೆ ದಾಖಲೆ: ಕ್ಷೇತ್ರಮಟ್ಟದ ಅಧಿಕಾರಿ/ಸಿಬ್ಬಂದಿಗಳ ನೆರವಿನೊಂದಿಗೆ ಸಭೆ ನಡೆಯುವ 15 ದಿನಗಳ ಮುಂಚಿತವಾಗಿ ಆಯಾ ಭಾಗದ ಸಾರ್ವಜನಿಕರಿಗೆ ಪೂರ್ವ ಮುದ್ರಿತ ಅರ್ಜಿ ನಮೂನೆ, ಅವಶ್ಯ ದಾಖಲಾತಿಗಳ ಪಟ್ಟಿಗಳುಳ್ಳ ಲಕೋಟೆಯನ್ನು ಮನೆ-ಮನೆಗೆ ತಲುಪಿಸತಕ್ಕದ್ದು. ಈ ಮೂಲಕ ಸಭೆಯಲ್ಲಿ ಹೆಚ್ಚಿನ ಜನರ ಭಾಗವಹಿಸುವಿಕೆ ಮತ್ತು ಕೆಳಹಂತದಲ್ಲಿಯೇ ಸಮಸ್ಯೆ ಪರಿಹರಿಸುವುದನ್ನು ಖಾತ್ರಿಪಡಿಸಿಕೊಳ್ಳುವುದು.
ಸಭೆ ಆಯೋಜನೆ: ಪ್ರಜಾಸೇವೆ ಆಂದೋಲನ ಸಭೆಗಳನ್ನು ಮಿತವ್ಯಯವಾಗಿ ಹಾಗೂ ಸಾಧ್ಯವಾದಷ್ಟು ವಿಶಾಲವಾದ ಸರ್ಕಾರಿ ಮೈದಾನ, ಶಾಲಾ/ಕಾಲೇಜು ಆವರಣ, ಸಮುದಾಯ ಭವನ ರೀತಿಯ ಜಾಗಗಳಲ್ಲಿ ವ್ಯವಸ್ಥಿತವಾಗಿ ಆಯೋಜಿಸತಕ್ಕದ್ದು.
ಸ್ವೀಕೃತಿ ಕೌಂಟರ್: ಈ ಸಭೆಗಳಲ್ಲಿ ಇಲಾಖಾವಾರು ಅರ್ಜಿ ಸ್ವೀಕೃತಿ ಕೌಂಟರ್‌ಗಳನ್ನು ಸ್ಥಾಪಿಸುವುದು. ಕೌಂಟರ್ ಗಳಲ್ಲಿ ಕಡ್ಡಾಯವಾಗಿ ಗಣಕಯಂತ್ರಗಳು/ ಲ್ಯಾಪ್ಟಾಪ್, ಪ್ರಿಂಟರ್, ಇಂಟರ್‌ನೆಟ್, ಲೇಖನ ಸಾಮಗ್ರಿಗಳು ಇತ್ಯಾದಿ ಅಗತ್ಯ ವ್ಯವಸ್ಥೆಗಳು ಇರುವಂತೆ ನೋಡಿಕೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಸರಕಾರ ಸುತ್ತೋಲೆಯಲ್ಲಿ ನಿರ್ದೇಶನ ನೀಡಿದೆ.
ಸ್ವೀಕೃತಿ ನೀಡುವುದು ಕಡ್ಡಾಯ: ಸಭೆಗಳಲ್ಲಿ ಸಮಸ್ಯೆಗಳ ಪರಿಹಾರದ ಜೊತೆಗೆ, ಸರ್ಕಾರದ ವಿವಿಧ ಯೋಜನೆ/ಕಾರ್ಯಕ್ರಮಗಳ ಅರ್ಹ ಫಲಾನುಭವಿಗಳ ನೋಂದಣಿಗೂ ಕ್ರಮವಹಿಸತಕ್ಕದ್ದು. ಜೊತೆಗೆ ಅರ್ಜಿಗಳ ವಿವರಗಳನ್ನು ಸ್ಥಳದಲ್ಲಿಯೇ ಸ್ವೀಕರಿಸಲಾಗುವ ಎಲ್ಲಾ https://ipgrs.karnataka.gov.in ಸಂಖ್ಯೆಯುಳ್ಳ ಸ್ವೀಕೃತಿಯನ್ನು ನೀಡತಕ್ಕದ್ದು.
ಸಾಲು-ಸಾಲು ಮಳಿಗೆ ಸ್ಥಾಪಿಸಿ: ಪ್ರಮುಖ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆ ಸ್ಥಾಪಿಸಿ, ಇಲಾಖೆಯ ಸವಲತ್ತುಗಳು, ಸೇವೆಗಳು ಸೇರಿದಂತೆ ಉತ್ತಮ ಅಭ್ಯಾಸಗಳ ಬಗ್ಗೆ ಪ್ರದರ್ಶನ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಪ್ರಜಾಸೇವೆ ಇಲಾಖೆಯು ಆಯಾ ಇಲಾಖಾ ಮುಖ್ಯಸ್ಥರು, ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಿ ನೀಡುವ ಏಕರೂಪದ ಬ್ಯಾಂಡಿಂಗ್ ಮಾದರಿಗಳು(ಬ್ಯಾನರ್, ಕರಪತ್ರ, ಅರ್ಜಿ ನಮೂನೆ, ಕೌಂಟರ್ ನಮೂನೆ ಇತ್ಯಾದಿ) ಮತ್ತು ಭಾಗವಹಿಸುವ ಇಲಾಖೆಗಳಿಂದ ನೀಡಲಾಗುವ ಸೇವೆ/ಸವಲತ್ತುಗಳ ಪಟ್ಟಿಯನ್ನು (ಅವಶ್ಯ ದಾಖಲೆಗಳ ಪಟ್ಟಿಯೊಂದಿಗೆ) ಸಭೆ ನಡೆಯುವ ಸ್ಥಳದಲ್ಲಿ ಪುದರ್ಶಿಸತಕ್ಕದ್ದು.
ಎಲ್‌ಇಡಿ ಪರದೆ: ತಾಲ್ಲೂಕು ಮತ್ತು ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಗಳಲ್ಲಿ ಕಡ್ಡಾಯವಾಗಿ ಸೂಕ್ತ ವೇದಿಕೆ, ಧ್ವನಿವರ್ಧಕ ವ್ಯವಸ್ಥೆ, ಎಲ್.ಇ.ಡಿ ಪರದೆ, ಸೇರಿದಂತೆ ಸಾರ್ವಜನಿಕರು ಅರ್ಜಿ ಸಲ್ಲಿಸಿದ ನಂತರ ಕುಳಿತುಕೊಳ್ಳಲು ಮತ್ತು ಭಾಗವಹಿಸುವ ಇಲಾಖಾ ಅಧಿಕಾರಿಗಳಿಗೆ ಪ್ರತ್ಯೇಕವಾದ ಆಸನ ವ್ಯವಸ್ಥೆ ಕಲ್ಪಿಸತಕ್ಕದ್ದು. ಸಾರ್ವಜನಿಕರಿಗೆ ಅವರ ಮನವಿಗಳ/ಅರ್ಜಿಗಳ ನೈಜ ಸಮಯದ ಸ್ಥಿತಿ-ಗತಿ ತಿಳಿಯುವ ವ್ಯವಸ್ಥೆ ಕಲ್ಪಿಸುವುದು. ಸಭೆಯಲ್ಲಿ ಭಾಗವಹಿಸುವ ಫಲಾನುಭವಿಗಳೊಂದಿಗೆ ಚರ್ಚೆ/ಸಮಾಲೋಚನೆ, ಅಭಿಪ್ರಾಯ ಸಂಗ್ರಹಣೆ ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಪ್ರಮಾಣ ಪತ್ರ, ಆದೇಶ ಪತ್ರ ಇತ್ಯಾದಿಗಳನ್ನು ಉಸ್ತುವಾರಿ ಸಚಿವರು/ ಶಾಸಕರ ಕಡೆಯಿಂದ ಸ್ಥಳದಲ್ಲಿಯೇ ವಿತರಿಸಲು ಕ್ರಮವಹಿಸತಕ್ಕದ್ದು. ಸಭೆಯಲ್ಲಿ ಭಾಗವಹಿಸುವವರಿಗೆ ಕನಿಷ್ಠ ಸೌಕರ್ಯಗಳಾದ ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ವ್ಯವಸ್ಥೆ ಇತ್ಯಾದಿಗಳನ್ನು ಕಲ್ಪಿಸುವುದು.
ಪ್ರತಿ ಸಭೆ ವಿವರ ಅಪ್‌ಲೋಡ್: ಆಯಾ ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿಗಳು ಪ್ರತಿ ಸಭೆ ಮುಕ್ತಾಯವಾದ ನಂತರ ಸಂಪೂರ್ಣ ವಿವರಗಳನ್ನು https://ipgrs.karnataka.gov.in ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವುದು. ಜೊತೆಗೆ ಪ್ರತಿ ಸಭೆಯಲ್ಲಿನ ಪ್ರಮುಖಾಂಶಗಳು, ಪೋಟೋ/ವೀಡಿಯೋ, ಫಲಾನುಭವಿಗಳ ಅಭಿಪ್ರಾಯ ಸೇರಿದಂತೆ ಒಟ್ಟಾರೆ ಸಾರಾಂಶಗಳನ್ನು ಜಿಲ್ಲಾಡಳಿತದ ಜಾಲತಾಣ ಸೇರಿದಂತೆ ನಂತರದ ದಿನಗಳಲ್ಲಿ ನಡೆಯುವ ಸಭೆಗಳಲ್ಲಿ ಪ್ರಚುರಪಡಿಸಲು ಕ್ರಮವಹಿಸಬೇಕು.
ಪರಿಶೀಲನೆ, ಅನುಷ್ಠಾನ ಜವಾಬ್ದಾರಿ: ಪ್ರತಿ ಬುಧವಾರ, ಆಯಾ ಜಿಲ್ಲಾಧಿಕಾರಿಗಳು ತಾಲ್ಲೂಕು ಮಟ್ಟದ ಹಾಗೂ ಹೋಬಳಿ ಮಟ್ಟದ ಪ್ರಜಾಸೇವೆ ಅಂದೋಲನ ಸಭೆಗಳಲ್ಲಿ ಸ್ವೀಕೃತವಾದ ಅರ್ಜಿಗಳ ಪ್ರಗತಿ ಪರಿಶೀಲನೆ ನಡೆಸತಕ್ಕದ್ದು. ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರಜಾಸೇವೆ ಆಂದೋಲನ ಸಭೆಗಳಲ್ಲಿ ಸ್ವೀಕರಿಸಲಾಗುವ ಅರ್ಜಿಗಳನ್ನು ತಮ್ಮ ಅಧೀನ ಅಧಿಕಾರಿಗಳಿಂದ ಸಕಾಲದಲ್ಲಿ ವಿಲೇವಾರಿ ಮಾಡಿಸಲು ಕ್ರಮವಹಿಸಿ, ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಗೆ ಮಾಹಿತಿ ಒದಗಿಸಲು ಕ್ರಮವಹಿಸುವುದು. ಪ್ರಜಾಸೇವೆ ಇಲಾಖೆಯು ಜಾಲತಾಣದ ಮೂಲಕ ಅರ್ಜಿಗಳ ವಿಲೇವಾರಿ ಜೊತೆಗೆ ಅವಧಿ ಮೀರಿದ ಅರ್ಜಿಗಳು ಸ್ವಯಂಚಾಲಿತವಾಗಿ ಆಯಾ ಇಲಾಖಾ ಮುಖ್ಯಸ್ಥರಿಗೆ ವರ್ಗಾವಣೆ ಆಗುವುದು ಮತ್ತು ಸೂಕ್ತ.
ಕಡತ ವಿಲೇವಾರಿಯಾಗದಿದ್ದರೆ ಡಿಸಿ ಹೊಣೆ: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ರಾಜ್ಯ ಮಟ್ಟದ ಪುಗತಿ ಪರಿಶೀಲನೆ ಸಭೆ ನಡೆಯಲಿದ್ದು, ಕಾಲಮಿತಿಯೊಳಗೆ ಅರ್ಜಿಗಳ ವಿಲೇವಾರಿ ಮಾಡದ ಜಿಲ್ಲಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸರಕಾರ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿ 15 ದಿನಗಳಿಗೊಮ್ಮೆ ಉಸ್ತುವಾರಿ ಜಿಲ್ಲೆಗೆ ಭೇಟಿ ನೀಡತಕ್ಕದ್ದು. ಸಾದ್ಯವಾದಷ್ಟು ಶುಕ್ರವಾರವೇ ಜಿಲ್ಲೆಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ಸೇರಿ ವಿದ್ಯಾರ್ಥಿನಿಲಯಗಳು, ವಸತಿ ಶಾಲೆ ಇತ್ಯಾದಿಗಳ ಅನಿರೀಕ್ಷಿತ ಭೇಟಿ ನಡೆಸಿ ರಾತ್ರಿ ವಾಸ್ತವ್ಯ ಮಾಡಿ ಮರುದಿನ(ಶನಿವಾರ) ಜಿಲ್ಲೆಯಲ್ಲಿ ನಡೆಯುವ ಪ್ರಜಾಸೇವ ಆಂದೋಲನ ಸಭೆಗಳಲ್ಲಿ ಭಾಗವಹಿಸತಕ್ಕದ್ದು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ನಿಗದಿತ ನಮೂನೆಯಲ್ಲಿಯೇ ಪರಿಶೀಲನಾ ವರದಿ ಮತ್ತು ಭೇಟಿ ವಿವರಗಳನ್ನು ಡಿಐಎಸ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡತಕ್ಕದ್ದು.
ಪ್ರಜಾಸೇವಾ/ಜನಸ್ಪಂದನ ಸಭೆಗಳ ಸಂದರ್ಭದಲ್ಲಿ ನಾಗರಿಕರಿಂದ ಸ್ವೀಕರಿಸಲಾಗುವ ಅರ್ಜಿಗಳು ಮತ್ತು ದೂರುಗಳನ್ನು ಪ್ರತಿ ಸಭಾ ಸ್ಥಳದಲ್ಲಿ ಸ್ಥಾಪಿಸಲಾಗುವ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕ ನಿರ್ವಹಿಸಬೇಕು. ಈ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳನ್ನು ನಡೆಸಲು ಅಗತ್ಯವಿರುವ ಕಂಪ್ಯೂಟರ್‌ಗಳು ಮತ್ತು ಕಂಪ್ಯೂಟರ್ ಅಪರೇಟರ್ ಗಳನ್ನು ಹಂತದಲ್ಲಿ ಖಚಿತಪಡಿಸಿಕೊಳ್ಳಬೇಕು, ಇದರಿಂದ ನಾಗರಿಕರಿಗೆ ಸೇವೆಗಳನ್ನು ಉಚಿತವಾಗಿ ಒದಗಿಸಬಹುದು.
ತಿಂಗಳ 2ನೇ ಮತ್ತು 4ನೇ ಶನಿವಾರದ ರಜಾ ದಿನದಂದು ಕಾರ್ಯನಿರ್ವಹಿಸಿದ ಪ್ರತಿಯಾಗಿ, ಗ್ರೂಪ್ ಸಿ ಮತ್ತು ಗ್ರೂಪ್ ಡಿ ಸಿಬ್ಬಂದಿಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ;/ ಹಂತದಲ್ಲಿ ಕಾಂಪೆನ್ನೇಟರಿ ಸಿಎಲ್ ಮಂಜೂರು ಮಾಡಬಹುದು. ಗ್ರೂಪ್ ಎ ಮತ್ತು ಗ್ರೂಪ್ ಬಿ ಸಿಬ್ಬಂದಿಗೆ ರಜೆ ಮಂಜೂರಾತಿಗೆ ಸಂಬಂಧಿಸಿದಂತೆ ಹೊರಡಿಸಲಾಗುವುದು. ಪ್ರತ್ಯೇಕ ಆದೇಶಗಳು/ನಿರ್ದೇಶನಗಳನ್ನು ಜನಸ್ಪಂದನ ದಿನದಂದು ವಿಲೇವಾರಿಗೆ ಕೈಗೆತ್ತಿಕೊಳ್ಳಲಾಗುವ ದೂರುಗಳನ್ನು ಎರಡು ಪ್ರತ್ಯೇಕ ಸರದಿಗಳ (ಕ್ಯೂ) ಅಡಿಯಲ್ಲಿ ನಿರ್ವಹಿಸಬೇಕು.
ಸರದಿ 1, ಹೊಸ ದೂರುಗಳು: ನಾಗರಿಕರು ಮೊದಲ ಬಾರಿಗೆ ದಾಖಲಿಸುತ್ತಿರುವ ದೂರುಗಳು,
ಸರದಿ 2 – ಇತ್ಯರ್ಥವಾಗದ/ತೃಪ್ತಿಕರವಾಗಿ ಇತ್ಯರ್ಥವಾಗದ ದೂರುಗಳು:
ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ಈಗಾಗಲೇ ದಾಖಲಾಗಿದ್ದು, ವಿಲೇವಾರಿಗೆ ನಿಗದಿಪಡಿಸಿದ ಗರಿಷ್ಠ 21 ದಿನಗಳ ಅವಧಿ ಮುಗಿದ ನಂತರವೂ ಯಾವುದೇ ಪ್ರತಿಕ್ರಿಯೆ ಅಥವಾ ತೃಪ್ತಿಕರ ಪ್ರತಿಕ್ರಿಯೆ ಬಂದಿರದ ದೂರುಗಳು. ಜನಸ್ಪಂದನ ಸಭೆಗಳನ್ನು ಆಯೋಜಿಸುವ ದಿನದಂದು ಸರ್ಕಾರಿ ಯೋಜನೆಗಳ ಬಗ್ಗೆ ನಾಗರಿಕರಿಗೆ ಮಾಹಿತಿ ಪ್ರಸಾರ ಮಾಡಲು ವಿವಿಧ ಸರ್ಕಾರಿ ಇಲಾಖೆಗಳ ಅಡಿಯಲ್ಲಿ ಲಭ್ಯವಿರುವ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಅನುದಾನವನ್ನು ಉಪ ವಿಭಾಗಾಧಿಕಾರಿಗಳು ಬಳಸಿಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಎರಡೂ ಬಗೆಯ ಜನಸ್ಪಂದನ ಸಭೆಗಳಲ್ಲಿ ಸ್ವೀಕರಿಸಲಾಗುವ ಎಲ್ಲಾ ಅರ್ಜಿಗಳು ಮತ್ತು ದೂರುಗಳನ್ನು ಪ್ರತಿ ಬುಧವಾರ ನಡೆಯುವ ಮೂರು-ಹಂತದ ಪರಿಶೀಲನಾ ವ್ಯವಸ್ಥೆಯ ಮೂಲಕ ಈ ಕೆಳಕಂಡಂತೆ ಪರಿಶೀಲಿಸಬೇಕು.
3 ಹಂತದ ಪರಿಶೀಲನೆ: ಬೆಳಿಗ್ಗೆ 9:00, 11:00: ತಾಲ್ಲೂಕು ಮಟ್ಟದ ಪರಿಶೀಲನೆ, ಆಯಾ ತಾಲ್ಲೂಕಿನ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಿಂದ. ಬೆಳಿಗ್ಗೆ 11:00-ಮಧ್ಯಾಹ್ನ 1:00: ಉಪ ವಿಭಾಗ ಮಟ್ಟದ ಪರಿಶೀಲನೆ, ಸಹಾಯಕ ಆಯುಕ್ತರು (ಉಪ ವಿಭಾಗ) ಇವರಿಂದ. ಮಧ್ಯಾಹ್ನ 3:00. – ಸಂಜೆ 5:00: ಜಿಲ್ಲಾ ಮಟ್ಟದ ಪರಿಶೀಲನೆ, ಜಿಲ್ಲಾಧಿಕಾರಿಗಳಿಂದ.
ಈ ಮೂರೂ ಹಂತದ ಪರಿಶೀಲನಾ ಸಭೆಗಳಲ್ಲಿ, ತಮ್ಮ ದೂರಿನ ಇತ್ಯರ್ಥದಿಂದ ತೃಪ್ತರಾಗದ ಸಾರ್ವಜನಿಕರು ಖುದ್ದು ಹಾಜರಾಗಿ ತಮ್ಮ ಅಹವಾಲು ಮಂಡಿಸಬಹುದು, ಇದರಿಂದ ಸಂಬಂಧಪಟ್ಟ ನಾಗರಿಕ ಮತ್ತು ಇಲಾಖಾ ಅಧಿಕಾರಿಯ ಸಮ್ಮುಖದಲ್ಲಿಯೇ ಅದನ್ನು ನೇರವಾಗಿ ಇತ್ಯರ್ಥಗೊಳಿಸಲು ಸಾಧ್ಯವಾಗಲಿದೆ.
ಆದ್ದರಿಂದ ಸಾರ್ವಜನಿಕರು ಸದರಿ ಸಭೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಅಹವಾಲುಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಪಡೆಯಲು ಅರ್ಜಿ ಸಲ್ಲಿಸಿ, ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಲಾಗಿದೆ.

