ಸಂದೀಪ್ ರೆಡ್ಡಿ ವಂಗಾ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಸ್ಪಿರಿಟ್’ ಸಿನಿಮಾ ಚಿತ್ರರಂಗದಲ್ಲಿ ಬೃಹತ್ ಮಟ್ಟದ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸುಮಾರು ಎರಡು ತಿಂಗಳ ಹಿಂದೆ ಪ್ರಭಾಸ್ ಭಾಗದ ೫೦ ದಿನಗಳ ಸುದೀರ್ಘ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಆ ನಂತರ ಪ್ರಭಾಸ್ ತಮ್ಮ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಫೌಜಿ’ಯ ಬಾಕಿ ಉಳಿದ ಭಾಗಗಳ ಶೂಟಿಂಗ್ ಮುಗಿಸಲು ಆ ಸೆಟ್‌ಗೆ ತೆರಳಿದ್ದರು.
ಸೆಪ್ಟೆಂಬರ್ ತಿಂಗಳಲ್ಲೇ ಪ್ರಭಾಸ್ ಮತ್ತೆ ‘ಸ್ಪಿರಿಟ್’ ಸೆಟ್‌ಗೆ ಹಾಜರಾಗಬೇಕಿತ್ತು. ಆದರೆ ಎರಡು ತಿಂಗಳು ಕಳೆದರೂ ಅವರು ಇನ್ನೂ ಚಿತ್ರತಂಡವನ್ನು ಸೇರಿಕೊಂಡಿಲ್ಲ. ಪ್ರಸ್ತುತ ಮುಂಬೈನಲ್ಲಿ ‘ಸ್ಪಿರಿಟ್’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಪ್ರಭಾಸ್ ಇಲ್ಲದೆಯೇ ಉಳಿದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಈ ನಡುವೆ, ಪ್ರಭಾಸ್ ಅಭಿನಯದ ‘ಫೌಜಿ’ ಸಿನಿಮಾ ಡಿಸೆಂಬರ್ ೩, ೨೦೨೬ರ ರಿಲೀಸ್ ಡೇಟ್‌ನಿಂದ ಹಿಂದೆ ಸರಿದಿದ್ದು, ೨೦೨೭ರಲ್ಲಿ ತೆರೆಕಾಣುವ ಸಾಧ್ಯತೆಯಿದೆ.
ಫೌಜಿ ಚಿತ್ರದ ರಿಲೀಸ್ ಮುಂದೂಡಲ್ಪಟ್ಟಿರುವುದರಿಂದ, ‘ಸ್ಪಿರಿಟ್’ ಸಿನಿಮಾದ ಬಿಡುಗಡೆ ದಿನಾಂಕದಲ್ಲೂ ಬದಲಾವಣೆಯಾಗಬಹುದು ಎಂಬ ವದಂತಿಗಳು ಹರಿದಾಡುತ್ತಿವೆ. ಪ್ರಸ್ತುತ ಈ ಚಿತ್ರವನ್ನು ಮಾರ್ಚ್ ೫, ೨೦೨೭ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ ದಿನಾಂಕ ಬದಲಾವಣೆ ಕುರಿತು ನಿರ್ಮಾಪಕರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಟಿ-ಸಿರೀಸ್ ಮತ್ತು ಭದ್ರಕಾಳಿ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರಕ್ಕೆ ಹರ್ಷವರ್ಧನ್ ರಾಮೇಶ್ವರ್ ಸಂಗೀತ ನೀಡುತ್ತಿದ್ದು, ನಟ ವಿವೇಕ್ ಒಬೆರಾಯ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

