HomeKarnatakaಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಉಪ ತಹಶೀಲ್ದಾರ್ ಗೆ ಅಧಿಕಾರ: ರಾಜ್ಯಾದ್ಯಂತ ಪ್ರತಿ ಗ್ರಾಪಂ, ವಾರ್ಡ್...

ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಉಪ ತಹಶೀಲ್ದಾರ್ ಗೆ ಅಧಿಕಾರ: ರಾಜ್ಯಾದ್ಯಂತ ಪ್ರತಿ ಗ್ರಾಪಂ, ವಾರ್ಡ್ ಗಳಲ್ಲಿ ಸಹಾಯ ಕೇಂದ್ರಗಳ ಸ್ಥಾಪನೆ

ಬೆಂಗಳೂರು: ಜೂನ್ 30 ರಿಂದ ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಲಿದ್ದು, ರಾಜ್ಯದ ಎಲ್ಲಾ ಮತದಾರರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ಜೂನ್ 30ರಿಂದ ಜುಲೈ 29ರವರೆಗೆ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಬಿಎಲ್ಓಗಳು ಒಟ್ಟು ಮೂರು ಬಾರಿ ನಿಮ್ಮ ಮನೆಗಳಿಗೆ ಬಂದು ಎನ್ಯುಮರೇಷನ್ ಅರ್ಜಿ ನೀಡಲಿದ್ದಾರೆ. ಮತದಾರರು ಈ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳು ಹಾಗೂ ಹೊಸ ಫೋಟೋಗಳೊಂದಿಗೆ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸದಿದ್ದರೆ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ. ಆಗಸ್ಟ್ 5ರಂದು ಕರಡು ಮತಪಟ್ಟಿ ಪ್ರಕಟಿಸಲಾಗುವುದು ಹಾಗೂ ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿಎಲ್ಎಗಳು ಕೂಡ ಈ ಪ್ರಕ್ರಿಯೆಯಲ್ಲಿ ನೆರವು ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಅರ್ಜಿ ಸಲ್ಲಿಕೆಗೆ ಜನರು ತಮ್ಮ ಎಪಿಕ್ ಕಾರ್ಡ್ ಸಂಖ್ಯೆ ಸೇರಿದಂತೆ ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಜಾತಿ ಪ್ರಮಾಣಪತ್ರ, ಅರಣ್ಯ ಹಕ್ಕು ಪತ್ರ, ಸರ್ಕಾರಿ ವಸತಿ ದಾಖಲೆ ಮತ್ತು ಪಿಂಚಣಿ ದಾಖಲೆ ಒಳಗೊಂಡಂತೆ 11 ಮಾದರಿಯ ಗುರುತಿನ ಚೀಟಿಗಳನ್ನು ಬಳಸಬಹುದು. ಸರ್ಕಾರ ಈಗಾಗಲೇ 5.50 ಕೋಟಿ ಜನರಿಗೆ (2,54,95,767 ಹಿಂದುಳಿದ ವರ್ಗ ಹಾಗೂ 2,94,51,027 ಎಸ್.ಸಿ/ಎಸ್.ಟಿ) ಅಧಿಕೃತ ಜಾತಿ ಪ್ರಮಾಣಪತ್ರ ವಿತರಿಸಿದ್ದು, ಇವುಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಜಾತಿ ಪ್ರಮಾಣಪತ್ರದಲ್ಲಿ ಸರಿಯಾದ ದೂರವಾಣಿ ಸಂಖ್ಯೆ ನೀಡಿದವರು ವಾಟ್ಸಾಪ್ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕಂದಾಯ ಇಲಾಖೆಯ ವತಿಯಿಂದ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಉಪ ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಲಾಗಿದೆ. ಇದಕ್ಕಾಗಿ ರಾಜ್ಯಾದ್ಯಂತ ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್‌ಗಳಲ್ಲಿ ಒಟ್ಟು 49,320 ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಬಾಡಿಗೆ ಮನೆಯಲ್ಲಿ ವಾಸಿಸುವವರು ಆಧಾರ್ ಕಾರ್ಡ್, ಬಾಡಿಗೆ ದಾಖಲೆ ಹಾಗೂ ಆ ಕ್ಷೇತ್ರದ ಮತಪಟ್ಟಿ ಸಂಖ್ಯೆಯನ್ನು ಒದಗಿಸಿ ಸ್ಥಳೀಯ ಆಡಳಿತದಿಂದ ಪ್ರಮಾಣಪತ್ರ ಪಡೆಯಬಹುದು. ನಮ್ಮ ರಾಜ್ಯದ ಪ್ರತಿಯೊಬ್ಬರಿಗೂ ಈ ದಾಖಲೆಗಳನ್ನು ಪಡೆಯಲು ಮುಕ್ತ ಅವಕಾಶವಿದೆ ಎಂದು ತಿಳಿಸಿದ್ದಾರೆ..

ಮತದಾನದ ಹಕ್ಕು ನಿಮ್ಮ ಬದುಕಿನ ಹಕ್ಕಾಗಿದ್ದು, ಇದನ್ನು ಕಳೆದುಕೊಂಡರೆ ಮುಂದಿನ ದಿನಗಳಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮಿ ಸೇರಿದಂತೆ ಗ್ಯಾರಂಟಿ ಯೋಜನೆಗಳು, ಪಿಂಚಣಿ ಹಾಗೂ ರಾಜ್ಯ ಸರ್ಕಾರದ ಇತರೆ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗಲಿದೆ. ಸದ್ಯದಲ್ಲೇ ಎಲ್ಲಾ ಯೋಜನೆಗಳ ಫಲಾನುಭವಿಗಳ ಮಾಹಿತಿ ಪಡೆಯುವ ಪ್ರಕ್ರಿಯೆ ಆರಂಭವಾಗಲಿದ್ದು, ತಕ್ಷಣಕ್ಕೆ ಯಾವುದೇ ಯೋಜನೆ ನಿಲ್ಲಿಸುವುದಿಲ್ಲ. ಈಗ 18 ವರ್ಷ ತುಂಬಿರುವ ಹೊಸ ಮತದಾರರು ಚುನಾವಣಾ ಆಯೋಗದ ‘ನಮೂನೆ 6’ (Form 6) ಅನ್ನು ವಯೋಮಿತಿ ದೃಢೀಕರಣ ಪತ್ರದೊಂದಿಗೆ ತುಂಬುವ ಮೂಲಕ ತಮ್ಮ ಮತದಾನದ ಹಕ್ಕನ್ನು ಪಡೆದುಕೊಳ್ಳಬಹುದು ಎಂದು ಸಿಎಂ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular