ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಂತ ಕಳಪೆ ಫಲಿತಾಂಶ ಪಡೆದ ಅನುದಾನಿತ ಪ್ರೌಢಶಾಲೆಗಳಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳುವಂತೆ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಅನುದಾನ, ಸೌಲಭ್ಯಗಳನ್ನೆಲ್ಲಾ ಪಡೆದು, ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ಕಡಿಮೆಯಾಗಲು ಈ ಶಾಲೆಗಳೇ ಪ್ರಮುಖ ಕಾರಣವಾದರೆ ಸಹಿಸಲು ಸಾಧ್ಯವಿಲ್ಲ ಎಂದು ಜಿಲ್ಲೆಯ ಅನುದಾನಿತ ಖಾಸಗಿ ಶಾಲೆಗಳ ಕಾರ್ಯವೈಖರಿ ಬಗ್ಗೆ ಸಚಿವ ಡಿ. ಸುಧಾಕರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೆಡಿಪಿ ಸಭೆಯಲ್ಲಿ ಕಳೆದ ವರ್ಷದ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ಹಾಗೂ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಜಿ.ಪಂ. ಸಿಇಒ ಡಾ. ಎಸ್. ಆಕಾಶ್ ಅವರು, ತಾವು ಈ ಹಿಂದೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವದ ಆಧಾರದಲ್ಲಿ, ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಏನೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಗಂಭೀರವಾಗಿ ಚರ್ಚೆ ನಡೆಸಿದ್ದೇನೆ. ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 10ನೇ ಸ್ಥಾನದೊಳಗೆ ಜಿಲ್ಲೆ ಸ್ಥಾನ ಪಡೆಯಬೇಕು. ಈ ನಿಟ್ಟಿನಲ್ಲಿ ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದ್ದು, ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಸಲಹೆ ಸೂಚನೆ ನೀಡಲಾಗಿದೆ. 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿ 23ನೇ ಸ್ಥಾನದಲ್ಲಿದೆ. ಎಸ್ಎಸ್ಎಲ್ಸಿ 2 ಮತ್ತು 3ನೇ ಪರೀಕ್ಷೆಯಲ್ಲಿ 21,881 ಮಕ್ಕಳಲ್ಲಿ 15,684 ಮಕ್ಕಳು ಉತೀರ್ಣರಾಗಿ ಶೇ.23ರಷ್ಟು ಫಲಿತಾಂಶ ಲಭಿಸಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಳಪೆ ಫಲಿತಾಂಶ ಪಡೆದ ಶಾಲೆಗಳ ಪೈಕಿ ಅನುದಾನಿತ ಶಾಲೆಗಳೇ ಹೆಚ್ಚಾಗಿವೆ. ಸರ್ಕಾರಿ ಶಾಲೆಗಳಲ್ಲೇ ಉತ್ತಮ ಫಲಿತಾಂಶ ಬಂದಿದೆ. ಕಳಪೆ ಫಲಿತಾಂಶ ಪಡೆದ 40 ಸರ್ಕಾರಿ ಹಾಗೂ 60 ಅನುದಾನಿತ ಶಾಲೆಗಳು ಸೇರಿದಂತೆ ಒಟ್ಟು 100 ಶಾಲೆಗಳನ್ನು ಗುರುತಿಸಲಾಗಿದೆ. ಈ ಶಾಲೆಗಳಲ್ಲಿ ಫಲಿತಾಂಶ ಉತ್ತಮಪಡಿಸಲು ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಸಚಿವರು ಮಾತನಾಡಿ, ಸರ್ಕಾರದಿಂದ ಸೌಲಭ್ಯ ಹಾಗೂ ಅನುದಾನ ಪಡೆಯುವ ಖಾಸಗಿ ಶಾಲೆಗಳಲ್ಲಿ ಕಳಪೆ ಫಲಿತಾಂಶ ಬಂದಿರುವುದು, ಅವರು ಉತ್ತಮ ಶಿಕ್ಷಣ ನೀಡುತ್ತಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ. ಇವುಗಳಿಗಿಂತ ಸರ್ಕಾರಿ ಶಾಲೆಗಳೇ ಉತ್ತಮ ಫಲಿತಾಂಶ ಪಡೆದಿವೆ. ಹೀಗಾಗಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಪಡೆದಿರುವ ಅನುದಾನಿತ ಶಾಲೆಗಳಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಕಡಿಮೆ ಫಲಿತಾಂಶ ಪಡೆದ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕು. ಕಡಿಮೆ ಫಲಿತಾಂಶ ನೀಡಿದ ವಿಷಯವಾರು ಶಿಕ್ಷಕರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಸಚಿವರು ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಅವರಿಗೆ ಸೂಚನೆ ನೀಡಿದರು.