ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ರಾಮಕೃಷ್ಣ ಆಶ್ರಮದ ವಿವೇಕ ಸ್ಮಾರಕ ಉದ್ಘಾಟನೆಗೆ ಮೋದಿ ಆಗಮಿಸಲಿದ್ದಾರೆ. ಆಗಸ್ಟ್ 1ರಂದು ಮಧ್ಯಾಹ್ನ 2:55 ಕ್ಕೆ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ ಮಧ್ಯಾಹ್ನ 3:15ಕ್ಕೆ ಒವೆಲ್ ಮೈದಾನಕ್ಕೆ ಆಗಮಿಸಲಿದ್ದಾರೆ. ರಸ್ತೆ ಮೂಲಕ ವಿವೇಕ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3:30 ರಿಂದ ಸಂಜೆ 5:15 ರವರೆಗೆ ರಾಮಕೃಷ್ಣ ಆಶ್ರಮದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5:20ಕ್ಕೆ ರಾಮಕೃಷ್ಣ ಆಶ್ರಮದ ಶಾಲೆಗೆ ಭೇಟಿ ನೀಡಲಿದ್ದಾರೆ. ಸಂಜೆ 5:55 ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ವಾಪಸ್ ತೆರಳಲಿದ್ದಾರೆ.
ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ನಿರ್ಮಿಸಿರುವ ವಿವೇಕ ಸ್ಮಾರಕ, ಸ್ವಾಮಿ ವಿವೇಕಾನಂದ ಸಂಸ್ಕೃತಿಕ ಯುವ ಕೇಂದ್ರ ಉದ್ಘಾಟನೆ ನೆರವೇರಿಸಲಿದ್ದಾರೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಸಂಜೆ ನಿರ್ಗಮಿಸಲಿದ್ದಾರೆ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಮೈಸೂರಿಗೆ ಆಗಮಿಸಲಿದ್ದಾರೆ.
ರಾಮಕೃಷ್ಣ ಆಶ್ರಮ ವತಿಯಿಂದ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನಿರ್ಮಿಸಿದ ವಿವೇಕ ಸ್ಮಾರಕ, ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ಉದ್ಘಾಟಿಸಲು ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವಾಗತಿಸಲಿದ್ದಾರೆ.
ನಂತರ ಪ್ರಧಾನಿಯವರು ಸೇನಾ ಹೆಲಿಕಾಪ್ಟರ್ ಮೂಲಕ ಮೈಸೂರು ವಿವಿ ಓವೆಲ್ ಮೈದಾನದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಹೆಲಿಪ್ಯಾಡ್ ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಹೊರಟು ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನಿರ್ಮಿಸಿರುವ ವಿವೇಕ ಸ್ಮಾರಕ ಉದ್ಘಾಟಿಸಲಿದ್ದಾರೆ.
ಸಂಜೆ 4:15 ರಿಂದ ರಾಮಕೃಷ್ಣ ಆಶ್ರಮದ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ಶ್ರೀ ರಾಮಕೃಷ್ಣ ಪರಮಹಂಸರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಂಜೆ ನಡೆಯುವ ನಿತ್ಯಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀರಾಮಕೃಷ್ಣರ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ/ ಸಂಜೆ 4:30ಕ್ಕೆ ರಾಮಕೃಷ್ಣ ವಿದ್ಯಾಶಾಲ ಸ್ಟೇಡಿಯಂನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ 30 ನಿಮಿಷ ಮಾತನಾಡುವರು/ ಈ ವೇಳೆ ವಿವೇಕಾನಂದ ಸ್ಮಾರಕ ಉದ್ಘಾಟನೆಯ ಸ್ಮರಣಾರ್ಥ ನಿರ್ಮಿಸಿದ ಶಿಲಾ ಫಲಕವನ್ನು ಅನಾವರಣಗೊಳಿಸಿ ಸಂಜೆ ಮೈಸೂರಿನಿಂದ ನಿರ್ಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಮ ಶಾಸಕ ಕೆ. ಹರೀಶ್ ಗೌಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೇಲೂರು ರಾಮಕೃಷ್ಣ ಮಠ ಅಧ್ಯಕ್ಷ ಸ್ವಾಮಿ ಗೌತಮನಂದ ಜಿ, ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಜಿ ಸಾನಿಧ್ಯ ವಹಿಸಲಿದ್ದಾರೆ. ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖ ರಸ್ತೆಗಳು ಪ್ರದೇಶಗಳಲ್ಲಿ ಡ್ರೋನ್ ಹಾರಾಟ ಸಂಪೂರ್ಣ ನಿಷೇಧಿಸಲಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

