ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದು, ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆಯುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ 70ನೇ ಜನ್ಮೋತ್ಸವ ಹಾಗೂ ಆಶ್ರಮದ 45ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಗುರೂಜಿಯವರ ಜನ್ಮದಿನದ ಸವಿನೆನಪಿಗಾಗಿ ನಿರ್ಮಿಸಲಾದ ಭವ್ಯ ಧ್ಯಾನ ಮಂದಿರವನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು. ರವಿಶಂಕರ್ ಗುರೂಜಿಯವರು ನನ್ನನ್ನು ಹೊಗಳುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ನನ್ನ ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಗುರೂಜಿಯವರ ಮತ್ತು ಆಶ್ರಮದ ಸೇವಾ ಕಾರ್ಯಗಳು ಭಾರತವನ್ನು ‘ವಿಶ್ವಗುರು’ವನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಕಳೆದ ನಾಲ್ಕು ದಶಕಗಳಲ್ಲಿ ವಿಶಾಲ ವಟವೃಕ್ಷದಂತೆ ಬೆಳೆದು ಜಾಗತಿಕವಾಗಿ ಲಕ್ಷಾಂತರ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ. ಯೋಗ ಮತ್ತು ಧ್ಯಾನದ ಮಹತ್ವ, ಭಾರತೀಯ ಪರಂಪರೆಯನ್ನು ಸ್ಮರಿಸುತ್ತಾ ಗುರೂಜಿಯವರ 100ನೇ ಜನ್ಮದಿನದ ಶತಮಾನೋತ್ಸವ ಕಾರ್ಯಕ್ರಮಕ್ಕೂ ಮತ್ತೆ ನಾನೇ ಬರುವುದಾಗಿ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಸೇವೆಯ ಮಹತ್ವವನ್ನು ಹೇಳಿದ ಪ್ರಧಾನಿ ಮೋದಿ, ನಮ್ಮಲ್ಲಿ ಸೇವೆ ಎನ್ನುವುದು ಪರಮ ಧರ್ಮ. ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರತಿ ಕಾರ್ಯಕರ್ತನಲ್ಲೂ ಸೇವಾ ಭಾವನೆ ಎದ್ದು ಕಾಣುತ್ತಿದೆ. ಗುರೂಜಿ ಅವರು ಕಳೆದ 45 ವರ್ಷಗಳ ಹಿಂದೆ ಬಿತ್ತಿದ ಬೀಜ ಇಂದು ವಿಶಾಲವಾದ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ವೃಕ್ಷದ ಸಾವಿರಾರು ಶಾಖೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರ ಬದುಕನ್ನು ಸುಂದರಗೊಳಿಸುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು. ಸೇವಾ ಭಾವನೆಯಿಂದ ಮಾಡಿದ ಕಾರ್ಯವು ಯಾವಾಗಲೂ ಸುಖದ ಫಲ ನೀಡುತ್ತದೆ ಎಂಬುದಕ್ಕೆ ಈ ಮಂದಿರವೇ ಸಾಕ್ಷಿ. ಈ ಆಶ್ರಮದ ಪವಿತ್ರ ಪರಿಸರದಲ್ಲಿ ಕಾಲ ಕಳೆದ ಸಂದರ್ಭ ಮತ್ತು ಇಲ್ಲಿನ ದಿವ್ಯ ಅನುಭವವು ಸ್ಮೃತಿಯಲ್ಲಿ ಸದಾ ಇರಲಿದೆ ಎಂದು ಹೇಳಿದರು.
ಬೆಂಗಳೂರು ಕೇವಲ ತಂತ್ರಜ್ಞಾನದ ನಗರವಲ್ಲ, ಇದು ಆಧ್ಯಾತ್ಮಿಕ ಚೇತನದ ಕೇಂದ್ರವೂ ಹೌದು. ಬೆಂಗಳೂರು ನಗರವು ವಿಶ್ವಕ್ಕೆ ಸಾಫ್ಟ್ವೇರ್ ಅನ್ನು ನೀಡುತ್ತಿದೆ. ಅದೇ ರೀತಿ ಆರ್ಟ್ ಆಫ್ ಲಿವಿಂಗ್ ಮೂಲಕ ವಿಶ್ವಕ್ಕೆ ಮಾನಸಿಕ ಶಾಂತಿಯ ಸಾಫ್ಟ್ವೇರ್ ಅನ್ನೂ ನೀಡುತ್ತಿದೆ. ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ಭಾರತದ ಸಂಸ್ಕಾರದ ಅವಿಭಾಜ್ಯ ಅಂಗಗಳಾಗಿದ್ದು, ಇವುಗಳನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವಲ್ಲಿ ಈ ಸಂಸ್ಥೆಯ ಪಾತ್ರ ಹಿರಿದು ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ತಲೆಮಾರಿನ ಹಿತದೃಷ್ಟಿಯಿಂದ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಆಶ್ರಮದ ಕಾರ್ಯಕರ್ತರಿಗೆ ಕೆಲವು ಮಹತ್ವದ ಕೆಲಸಗಳನ್ನು ವಹಿಸುವೆ. ಕೆಮಿಕಲ್ ಗೊಬ್ಬರಗಳಿಂದ ನಮ್ಮ ಭೂಮಿ ತಾಯಿಯನ್ನು ರಕ್ಷಿಸುವುದು ಕೂಡ ಒಂದು ಆರ್ಟ್ ಆಫ್ ಲಿವಿಂಗ್. ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಿ. ಜಲ ಸಂರಕ್ಷಣೆ ಮತ್ತು ಪ್ರತಿ ಹನಿ ನೀರನ್ನು ಉಳಿಸುವುದು ಬದುಕಿನ ಅತ್ಯಗತ್ಯ ಕಲೆಯಾಗಲಿ ಎಂದರು.
ಭಾರತದ ಯುವಜನತೆ ಇಂದು ಬಾಹ್ಯಾಕಾಶದಿಂದ ಡಿಜಿಟಲ್ ಪೇಮೆಂಟ್ವರೆಗೆ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ ಮೋದಿ, ‘ಯುವಕರು ಮಾನಸಿಕವಾಗಿ ಶಾಂತರಾಗಿದ್ದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಆಧುನಿಕ ಯುಗದ ಒತ್ತಡಗಳನ್ನು ಎದುರಿಸಲು ಧ್ಯಾನ ಮಂದಿರವು ಶಾಂತಿ ಮತ್ತು ಚೈತನ್ಯದ ಕೇಂದ್ರವಾಗಲಿದೆ ಎಂದು ಹೇಳಿದರು.

