ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಲೆಂದು ಯುವಕನೊಬ್ಬ ಬ್ಯಾರಿಕೇಡ್ ನ್ನು ಜಂಪ್ ಮಾಡಿ ಮುನ್ನುಗ್ಗಲು ಯತ್ನಿಸಿದ ಘಟನೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ನಲ್ಲಿ ನಡೆದಿದೆ.
ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಇಂದು ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು, ಹಳದಿ ಮಾರ್ಗದ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಿದ್ದರು. ಮೆಟ್ರೋ ಮೂರನೇ ಹಂತದ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ರಸ್ತೆ ಮಾರ್ಗವಾಗಿ ಸೌತ್ ಎಂಡ್ ಸರ್ಕಲ್ ಮಾರ್ಗವಾಗಿ ರಾಗಿಗುಡ್ಡ ಮೆಟ್ರೋ ಸ್ಟೇಷನ್ ಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಜನಸ್ತೋಮ ನೆರೆದಿದ್ದು, ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಪ್ರಧಾನಿ ಮೋದಿಯವರನ್ನು ನೋಡಲು ಲಕ್ಷಾಣ್ತರ ಜನರು ಆಗಮಿಸಿದ್ದರು. ಈ ವೇಳೆ ಸೌತ್ ಎಂಡ್ ರಸ್ತೆಬಳಿ ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ಯುವಕನೊಬ್ಬ ಏಕಾಏಕಿ ಬ್ಯಾರಿಕೇಡ್ ಜಿಗಿದು ಮುನ್ನುಗ್ಗಲು ಯತ್ನಿಸಿದ್ದಾನೆ.
ಯುವಕ ರಸ್ತೆ ಹಿಂಭಾಗದ ಬ್ಯಾರಿಕೇಡ್ ನ್ನು ಜಂಪ್ ಮಾಡಿ ಫುಟ್ ಪಾತ್ ಗೆ ಬಂದಿದ್ದಾನೆ. ಮತ್ತೊಂದು ಬ್ಯಾರಿಕೇಡ್ ಜಂಪ್ ಮಾಡಲು ಯತ್ನಿಸುತ್ತಿದ್ದಂತೆ ತಕ್ಷಣ ಪೊಲೀಸರು ಆತನನ್ನು ತಡೆದಿದ್ದಾರೆ. ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಧಾನಿ ಮೋದಿ ನೋಡಬೇಕೆಂಬ ಉತ್ಸಾಹದಲ್ಲಿ ಬ್ಯಾರಿಕೇಡ್ ಜಂಪ್ ಮಾಡಿದ್ದಾಗಿ ಯುವಕ ತಿಳಿಸಿದ್ದಾನೆ. ಬಳಿಕ ಆತನನ್ನು ಸ್ಥಳದಿಂದ ಹೊರಕಳುಹಿಸಲಾಗಿದೆ.