ಬಹಾಮಾಸ್‌ನಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದ್ದು, 10 ಮಂದಿ ಮೃತಪಟ್ಟಿದ್ದಾರೆ. ದೇಶದ ಅತಿದೊಡ್ಡ ದ್ವೀಪಗಳಲ್ಲಿ ಒಂದಾದ ಆಂಡ್ರೋಸ್ (Andros Island) ದ್ವೀಪದಲ್ಲಿ ಈ ದುರಂತ ಸಂಭವಿಸಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಬಹಾಮಾಸ್ ರಾಜಧಾನಿ ನಾಸ್ಸೌ (Nassau) ನಗರದ ಲಿಂಡನ್ ಪಿಂಡ್ಲಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್‌ಆಫ್ ಆಗಿತ್ತು. ವಿಮಾನದಲ್ಲಿ 9 ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಸೇರಿ ಒಟ್ಟು 10 ಮಂದಿ ಇದ್ದರು.
ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ, ಆಂಡ್ರೋಸ್ ದ್ವೀಪದ ನಿಕೋಲ್ಸ್ ಟೌನ್ ಪೊಲೀಸ್ ಠಾಣೆಗೆ ವಿಮಾನ ಪತನದ ಮಾಹಿತಿ ಲಭ್ಯವಾಯಿತು. ಸ್ಯಾನ್ ಆಂಡ್ರೋಸ್ ವಿಮಾನ ನಿಲ್ದಾಣದ ಪಶ್ಚಿಮ ಭಾಗದ ಪೊದೆಗಳಲ್ಲಿ ವಿಮಾನ ಪತನಗೊಂಡಿದೆ ಎಂದು ರಾಯಲ್ ಬಹಾಮಾಸ್ ಪೊಲೀಸ್ ಆಯುಕ್ತೆ ಶಾಂತಾ ಎಮಿಲಿ ನೋಲ್ಸ್ ತಿಳಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಆಗ ಒಬ್ಬರು ಮಾತ್ರ ಜೀವಂತವಾಗಿದ್ದು, ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅವರೂ ಮೃತಪಟ್ಟರು. ಇದರಿಂದಾಗಿ ವಿಮಾನದಲ್ಲಿದ್ದ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.ಸದ್ಯಕ್ಕೆ ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಲ್ಯಾಂಡಿಂಗ್ ವೇಳೆ ತಾಂತ್ರಿಕ ತೊಂದರೆ?
ಬಹಾಮಾಸ್‌ನ ವಿಮಾನ ಅಪಘಾತ ತನಿಖಾ ಪ್ರಾಧಿಕಾರ ನೀಡಿರುವ ಪ್ರಾಥಮಿಕ ವರದಿ ಪ್ರಕಾರ, ಫ್ಲಾಮಿಂಗೋ ಏರ್ ಸಂಸ್ಥೆ ನಿರ್ವಹಿಸುತ್ತಿದ್ದ ಸೆಸ್ನಾ 402 (Cessna 402) ವಿಮಾನವು ನಾಸ್ಸೌದಿಂದ ಸ್ಯಾನ್ ಆಂಡ್ರೋಸ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು.ವಿಮಾನವು ಲ್ಯಾಂಡಿಂಗ್ ವೇಳೆ ಉಂಟಾದ ತಾಂತ್ರಿಕ ಸಮಸ್ಯೆಯಿಂದ ನಿಯಂತ್ರಣ ತಪ್ಪಿ ಸಮೀಪದ ಪೊದೆಗಳಲ್ಲಿ ಪತನಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಫ್ಲಾಮಿಂಗೋ ಏರ್ ಸೇವೆಗಳು ಸ್ಥಗಿತ
ಈ ದುರ್ಘಟನೆಯ ಬಳಿಕ ಬಹಾಮಾಸ್‌ನ ಇಂಧನ ಮತ್ತು ಸಾರಿಗೆ ಸಚಿವಾಲಯ ಮುನ್ನೆಚ್ಚರಿಕೆ ಕ್ರಮವಾಗಿ ಫ್ಲಾಮಿಂಗೋ ಏರ್ ಸಂಸ್ಥೆಯ ಎಲ್ಲಾ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ, ಈ ಬಗ್ಗೆ ಫ್ಲಾಮಿಂಗೋ ಏರ್ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.ಪ್ರಸ್ತುತ, ಬಹಾಮಾಸ್ ಪೊಲೀಸರು ಹಾಗೂ ವಿಮಾನಯಾನ ಅಧಿಕಾರಿಗಳು ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

