ಕಲಬುರಗಿ : ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನಡುವಿನ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು, ತಾವು ಸಚಿವರಾಗಿರುವವರೆಗೂ ರಾಜ್ಯದಲ್ಲಿ RSS ಪಥಸಂಚಲನ ನಡೆಸಲು ಸರ್ಕಾರದ ಅನುಮತಿ ಕಡ್ಡಾಯ ಎಂದು ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, RSS ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ ಎಂದರು. “100 ವರ್ಷಗಳ ಇತಿಹಾಸವಿದೆ ಎಂದು ಹೇಳುವ ಸಂಘಟನೆ ತನ್ನ ದಾಖಲೆಗಳನ್ನು ತೋರಿಸಬೇಕು. ಪಥಸಂಚಲನ ನಡೆಸಲು ಕಾನೂನುಬದ್ಧವಾಗಿ ಅನುಮತಿ ಪಡೆಯಲೇಬೇಕು. ದಾಖಲೆಗಳು ಸಿಗುವವರೆಗೆ ನಾವು ಸುಮ್ಮನಿರುವುದಿಲ್ಲ” ಎಂದು ಹೇಳಿದರು.
ತಮ್ಮ ಹೇಳಿಕೆಗಳ ಬಗ್ಗೆ ಪ್ರಶ್ನೆ ಎತ್ತಿದ ಬಳಿಕ ಬಿಜೆಪಿ ಹಾಗೂ RSS ಬೆಂಬಲಿಗರು ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು. “ನನ್ನ ವೈಯಕ್ತಿಕ ಜೀವನ ಅಥವಾ ರೂಪದ ಬಗ್ಗೆ ಟೀಕೆ ಮಾಡಿದರೂ ನಾನು ಹೆದರುವುದಿಲ್ಲ. ನನ್ನ ಕೆಲಸವೇ ಅವರಿಗೆ ಉತ್ತರ ನೀಡುತ್ತದೆ” ಎಂದು ಅವರು ಹೇಳಿದರು.ಆರ್ಎಸ್ಎಸ್ಗೆ 100 ವರ್ಷದ ಇತಿಹಾಸವಿದೆ ಎಂದು ಹೇಳಿಕೊಳ್ಳುತ್ತೀರಿ. ಆದರೆ ನಿಮ್ಮ ಸಂಘಟನೆಯ ಕಾನೂನುಬದ್ಧ ದಾಖಲೆಗಳು ಎಲ್ಲಿವೆ ? ಪಥಸಂಚಲನ ನಡೆಸಬೇಕಾದರೆ ಸರ್ಕಾರದ ಅನುಮತಿ ಕಡ್ಡಾಯ. ದಾಖಲೆಗಳನ್ನು ಹುಡುಕಿಕೊಂಡು ಬನ್ನಿ, ಅಲ್ಲಿಯವರೆಗೆ ಸುಮ್ಮನೆ ಬಿಡುವುದಿಲ್ಲ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇದೇ ವೇಳೆ, ಅಯೋಧ್ಯ ರಾಮಮಂದಿರ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪವನ್ನೂ ಖರ್ಗೆ ಮಾಡಿದರು. ದೇವಸ್ಥಾನದ ಕಾಮಗಾರಿಯಲ್ಲಿ ಕಮಿಷನ್ ದಂಧೆ ನಡೆದಿದೆ ಎಂದು ಆರೋಪಿಸಿ, ಈ ವಿಚಾರದ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.

