ಬೆಂಗಳೂರು: ರಾಜ್ಯದಲ್ಲಿ ದೀರ್ಘಕಾಲದಿಂದ ನೆಲೆಸಿರುವ ಜನರಿಗೆ ಕರ್ನಾಟಕ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ರಾಜ್ಯದಲ್ಲಿ ಶಾಶ್ವತ ನಿವಾಸ ಪ್ರಮಾಣ ಪತ್ರ (Permanent Resident Certificate) ನೀಡಲು ಕಂದಾಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.ಅರ್ಜಿ ಸಲ್ಲಿಸಿದ ಕೇವಲ 7 ದಿನಗಳೊಳಗೆ ಈ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.
ಪ್ರಮಾಣಪತ್ರ ಪಡೆಯಲು ಇರಬೇಕಾದ ಅರ್ಹತೆಗಳು:
ಕನಿಷ್ಠ ವಾಸದ ಅವಧಿ: ಅರ್ಜಿದಾರರು, ಅವರ ತಂದೆ-ತಾಯಿ ಅಥವಾ ಕಾನೂನುಬದ್ಧ ಪಾಲಕರು ಕರ್ನಾಟಕದಲ್ಲಿ ಸತತವಾಗಿ ಕನಿಷ್ಠ 10 ವರ್ಷಗಳ ಕಾಲ ವಾಸವಿರಬೇಕು.
ವ್ಯಾಸಂಗ: ಅರ್ಜಿದಾರರು ಕರ್ನಾಟಕದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿತೀಯ ಪಿಯುಸಿ/12ನೇ ತರಗತಿ ಅಥವಾ ತತ್ಸಮಾನ ಹಂತದವರೆಗೆ ಕನಿಷ್ಠ 10 ಶೈಕ್ಷಣಿಕ ವರ್ಷಗಳ ಕಾಲ ಓದಿರಬೇಕು.
ಸ್ಥಳೀಯ ಜನನ: ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿಯೇ ಜನಿಸಿರಬೇಕು.
ಆಸ್ತಿ ಮಾಲೀಕತ್ವ: ಅರ್ಜಿದಾರರು ಅಥವಾ ಅವರ ಕುಟುಂಬದವರು ಕರ್ನಾಟಕದಲ್ಲಿ ಸ್ವಂತ ವಸತಿ ಅಥವಾ ಇತರೆ ಸ್ಥಿರಾಸ್ತಿಯ ಮಾಲೀಕತ್ವ ಹೊಂದಿರಬೇಕು.
ವೈವಾಹಿಕ ಸಂಬಂಧ: ಅರ್ಜಿದಾರರು ಕರ್ನಾಟಕದಲ್ಲಿ ವಾಸಿಸುವ ವ್ಯಕ್ತಿಯನ್ನು ವಿವಾಹವಾಗಿದ್ದು, ರಾಜ್ಯದಲ್ಲಿಯೇ ನೆಲೆಸಿದ್ದರೆ ಸೂಕ್ತ ದಾಖಲೆ ಸಲ್ಲಿಸಿ ಪ್ರಮಾಣಪತ್ರ ಪಡೆಯಬಹುದು.
ಯಾವೆಲ್ಲಾ ದಾಖಲೆಗಳು ಕಡ್ಡಾಯ?
ಅರ್ಜಿದಾರರು ಅಥವಾ ಅವರ ಪೋಷಕರ ಹೆಸರು ಸಾಮಾನ್ಯ ನಿವಾಸಿಯೆಂದು ದಾಖಲಾಗಿರುವ ಕೆಳಗಿನ ಸರ್ಕಾರಿ ದಾಖಲೆಗಳನ್ನು ಪುರಾವೆಯಾಗಿ ನೀಡಬೇಕು:
ಆಧಾರ್ ಕಾರ್ಡ್, ರೇಷನ್ ಕಾರ್ಡ್ (ಪಡಿತರ ಚೀಟಿ) ಹಾಗೂ ವೋಟರ್ ಐಡಿ (ಮತದಾರರ ಪಟ್ಟಿ).
ಕಂದಾಯ ದಾಖಲೆಗಳು ಅಥವಾ ಇತರೆ ವಿಶ್ವಾಸಾರ್ಹ ಸರ್ಕಾರಿ ಪುರಾವೆಗಳು.
ಅರ್ಜಿ ಸಲ್ಲಿಕೆ ಹೇಗೆ? ಎಲ್ಲಿ ಕೌಂಟರ್ ಇರಲಿವೆ?
ಆನ್‌ಲೈನ್ ಅರ್ಜಿ: ಅರ್ಹರಾದವರು ಸೇವಾ ಸಿಂಧು ಪೋರ್ಟಲ್ ಅಥವಾ ಅಟಲ್ ಜನಸ್ನೇಹಿ ಕೇಂದ್ರ (AJSK) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಸಹಾಯ ಕೌಂಟರ್‌ಗಳು: ಆದೇಶ ಹೊರಬಿದ್ದ ಒಂದು ವಾರದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಕಚೇರಿಗಳಲ್ಲಿ ‘ಸಹಾಯ ಮತ್ತು ಸೌಲಭ್ಯ ಕೌಂಟರ್’ ಸ್ಥಾಪನೆಯಾಗಲಿವೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಸಿಎಸ್‌ಸಿ ಕೇಂದ್ರಗಳಲ್ಲೂ ಅರ್ಜಿ ಪ್ರಕ್ರಿಯೆ ನಡೆಯಲಿದೆ.
ಮೀಸಲಾತಿಗೆ ಅನ್ವಯಿಸಲ್ಲ: ಈ ಶಾಶ್ವತ ನಿವಾಸ ಪ್ರಮಾಣ ಪತ್ರವು ಕೇವಲ ಆಡಳಿತಾತ್ಮಕ ಉದ್ದೇಶದ ಪುರಾವೆಯಾಗಿದೆ. ಇದು ಯಾವುದೇ ಸರ್ಕಾರಿ ಉದ್ಯೋಗ ಅಥವಾ ಭೂ ಮಂಜೂರಾತಿಯ ಮೀಸಲಾತಿಗೆ ಅನ್ವಯಿಸುವುದಿಲ್ಲ.
ಪ್ರಾಧಿಕಾರ: ತಹಶೀಲ್ದಾರ್ ಅಥವಾ ಉಪ ತಹಶೀಲ್ದಾರ್ ಅವರು ಪ್ರಮಾಣಪತ್ರ ನೀಡುವ ಪ್ರಾಧಿಕಾರವಾಗಿದ್ದು, ಸಹಾಯಕ ಆಯುಕ್ತರು (AC) ಮೇಲ್ಮನವಿ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು (DC) ಪುರಾವೆ ಪರಿಶೀಲನಾ ಪ್ರಾಧಿಕಾರವಾಗಿರುತ್ತಾರೆ. ಈ ವಿಷಯದಲ್ಲಿ ಕಂದಾಯ ಇಲಾಖೆಯ ತೀರ್ಮಾನವೇ ಅಂತಿಮವಾಗಿರುತ್ತದೆ.

