ಬೆಂಗಳೂರು: ಕೆ.ಪಿ.ಎಸ್.ಸಿ. ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಿಡಿಒ ಹುದ್ದೆ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ 26 ಲಕ್ಷ ರೂ. ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಕೋಟೆ ನಿವಾಸಿ ಜಿ.ಕೆ. ರಘುನಂದನ್ ಈ ಕುರಿತಾಗಿ ದೂರು ನೀಡಿದ್ದಾರೆ. ಸಂತೋಷ್ ಹೊಸಮನಿ, ರಾವ್, ಬಸವರಾಜ್ ಮತ್ತು ಮಹೇಶ್ ಎಂಬುವರ ಮೇಲೆ ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಸಂತೋಷ್ ಹೇಳಿಕೊಂಡು ಕೆ.ಪಿ.ಎಸ್.ಸಿ. ಉದ್ಯೋಗಸೌಧದ ಅಧಿಕಾರಿಗಳು, ವಿಧಾನಸೌಧ ಸಚಿವಾಲಯದ ಅಧಿಕಾರಿಗಳ ಜತೆಗೆ ನೇರ ಸಂಪರ್ಕ ಮತ್ತು ಪರಿಚಯವಿದೆ. ನಿಮಗೆ ಕೆ.ಪಿ.ಎಸ್.ಸಿ. ಮೂಲಕ ಪಿಡಿಒ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. 20 ಲಕ್ಷ ರೂ. ಮುಂಗಡವಾಗಿ ಕೇಳಿದ್ದು, ಇದನ್ನು ನಂಬಿದ ಜಿ.ಕೆ. ರಘುನಂದನ್ 2024ರ ಡಿಸೆಂಬರ್ 5ರಂದು ಒಡವೆ ಒತ್ತೆ ಇಟ್ಟು 10 ಲಕ್ಷ ರೂ. ಗಳನ್ನು ಮಹೇಶ್ ಮತ್ತು ನಂದೀಶ್ ಎಂಬುವರ ಮೂಲಕ ನೀಡಿದ್ದರು. ನಂತರ 2025ರ ಮಾರ್ಚ್ ನಲ್ಲಿ 2 ಲಕ್ಷ ರೂ. ಹೀಗೆ ಹಂತ ಹಂತವಾಗಿ ಒಟ್ಟು 26 ಲಕ್ಷ ರೂ. ನೀಡಿದ್ದಾರೆ.
ಪಿಡಿಒ ಹುದ್ದೆಯ ಆದೇಶ ಪ್ರತಿ ಬರುವುದು ತಡವಾಗಿದೆ ಎಂದು ನಂಬಿಸಲು ಬಸವರಾಜ್ ಎಂಬ ವ್ಯಕ್ತಿಯಿಂದ ಸಂತೋಷ್ ವಾಟ್ಸಾಪ್ ಕರೆ ಮಾಡಿಸಿ ಸಮಾಧಾನಪಡಿಸಲು ಪ್ರಯತ್ನಿಸಿದ್ದ. ನಂತರ ರಾವ್ ಎಂಬ ವ್ಯಕ್ತಿ ಕೆ.ಪಿ.ಎಸ್.ಸಿ. ಕಚೇರಿಯ ದೂರವಾಣಿಯಿಂದ ಕರೆ ಮಾಡಿ ಕೆಲಸ ಮಾಡಿ ಕೊಡುವ ಭರವಸೆ ನೀಡಿದ್ದರು. ಹೀಗೆ ಸುಳ್ಳು ಹೇಳುತ್ತಾ 26 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿ.ಕೆ. ರಘುನಂದನ್ ದೂರು ನೀಡಿದ್ದಾರೆ.

