ಬಿಹಾರದ ರಾಜಧಾನಿ ಪಾಟ್ನಾದಲ್ಲಿ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಮೂವರು ಯುವಕರ ನಡುವೆ ತೀವ್ರ ತಳ್ಳಾಟ ಮತ್ತು ಘರ್ಷಣೆ ನಡೆದಿದ್ದು, ಈ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಿಕೊಂಡು ಓರ್ವ ಯುವಕನನ್ನು ಬಂಧಿಸಿದ್ದಾರೆ.
ಘಟನೆಯ ವಿವರ
ರಾಮಕೃಷ್ಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖೇಮ್ನಿಚಕ್-ಸುಭಾಷ್‌ನಗರ ಮೋಡ್ ಬಳಿ ಸೆಪ್ಟೆಂಬರ್ 30 ರ ರಾತ್ರಿ ಸುಮಾರು 8:30 ರ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳಾ ಸಬ್ ಇನ್‌ಸ್ಪೆಕ್ಟರ್ ಪ್ರಿಯಾಂಕಾ ಆನಂದ್ ಅವರು ನಾಲ್ವರು ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಕೂಟರ್‌ನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ರಸ್ತೆಬದಿಯಲ್ಲಿ ಶಂಕಾಸ್ಪದವಾಗಿ ನಿಂತಿದ್ದ ಮೂವರು ಯುವಕರನ್ನು ತಡೆದು ವಿಚಾರಣೆ ನಡೆಸಲು ಯತ್ನಿಸಿದಾಗ, ಯುವಕರು ಮಹಿಳಾ ಸಿಬ್ಬಂದಿಗೆ ಅಸಭ್ಯವಾಗಿ ಮಾತುಗಳನ್ನಾಡಿ ಗೇಲಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದರಿಂದ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈಮೀರಿದೆ. ಯುವಕರು ಮಹಿಳಾ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿ ಸ್ಥಳದಿಂದ ಓಡಿಹೋಗಲು ಯತ್ನಿಸಿದ್ದಾರೆ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಮಹಿಳಾ ಎಸ್‌ಐ ಯುವಕನಿಗೆ ಕಪಾಳಮೋಕ್ಷ ಮಾಡುವುದು ಹಾಗೂ ಪ್ರತಿಯಾಗಿ ಯುವಕ ಕೂಡ ಅಧಿಕಾರಿಗೆ ಹೊಡೆಯುವುದು ಕಂಡುಬಂದಿದೆ.
ಓರ್ವನ ಬಂಧನ, ಉಳಿದವರಿಗಾಗಿ ಶೋಧ
ಘಟನೆಗೆ ಸಂಬಂಧಿಸಿದಂತೆ ರಾಮಕೃಷ್ಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬಂಧಿತ ಯುವಕನನ್ನು ಖುಸ್ರುಪುರ ಮೂಲದ, ಪ್ರಸ್ತುತ ಬಾಡಿಗೆ ಮನೆಯಲ್ಲಿ ವಾಸವಿದ್ದ 22 ವರ್ಷದ ಪ್ರದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಉಳಿದ ಇಬ್ಬರು ಯುವಕರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಘಟನೆಯ ಒಂದು ಭಾಗವನ್ನು ಮಾತ್ರ ತೋರಿಸುತ್ತಿದ್ದು, ನಿಜವಾಗಿ ಆರಂಭದಲ್ಲಿ ಏನಾಯಿತು ಎಂಬುದನ್ನು ಸ್ಪಷ್ಟಪಡಿಸಲು ಪೊಲೀಸರು ಸಂಪೂರ್ಣ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

