ನವದೆಹಲಿ-ಭಾರತೀಯ ಪಾಸ್‌ಪೋರ್ಟ್ ಎನ್ನುವುದು ಭಾರತೀಯ ನಾಗರಿಕರು ದೇಶದಿಂದ ನಿರ್ಗಮಿಸುವುದನ್ನು ನಿಯಂತ್ರಿಸಲು ನೀಡಲಾಗುವ ಪ್ರಯಾಣ ದಾಖರೆಯೇ ವಿನಃ, ಅದು ಪೌರತ್ವಕ್ಕೆ ನಿರ್ಣಾಯಕ ಪುರಾವೆಯಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
ಭಾರತೀಯ ಪೌರತ್ವವನ್ನು ಅಧಿಕೃತವಾಗಿ ಸಾಬೀತುಪಡಿಸುವ ದಾಖಲೆಗಳ ಕುರಿತು ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಈ ಕುರಿತು ಮಹತ್ವದ ಸ್ಪಷ್ಟನೆ ನೀಡಿದೆ. ರಾಜ್ಯಸಭಾ ಸಂಸದ ಅಬ್ದುಲ್ ವಹಾಬ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ಭಾರತೀಯ ನಾಗರಿಕರು ಮಾತ್ರ ಪಾಸ್‌ಪೋರ್ಟ್ ಪಡೆಯಲು ಅರ್ಹರು ಎಂದು ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ಪಾಸ್‌ಪೋರ್ಟ್ ಅನ್ನು ಪೌರತ್ವದ ನಿರ್ಣಾಯಕ ಪುರಾವೆ ಎಂದು ಘೋಷಿಸಲು ಸರ್ಕಾರ ನಯವಾಗಿ ನಿರಾಕರಿಸಿದೆ. ಬದಲಿಗೆ, ಇದು ಕೇವಲ ಪ್ರಯಾಣ ದಾಖಲೆಯಾಗಿದ್ದು, ಸ್ಥಾಪಿತ ಪ್ರಕ್ರಿಯೆಯ ಮೂಲಕ ಸೂಕ್ತ ಪರಿಶೀಲನೆ ನಡೆಸಿದ ನಂತರವೇ 1967ರ ಪಾಸ್‌ಪೋರ್ಟ್ ಕಾಯ್ದೆಯಡಿಯಲ್ಲಿ ಇದನ್ನು ವಿತರಿಸಲಾಗುತ್ತದೆ ಎಂದು ಪುನರುಚ್ಚರಿಸಿದೆ.
ಪಾಸ್‌ಪೋರ್ಟ್ ಕಾಯ್ದೆ 1967 ಏನು ಹೇಳುತ್ತದೆ?
ಪಾಸ್‌ಪೋರ್ಟ್ ಕಾಯ್ದೆ, 1967:
ಈ ಕಾಯ್ದೆಯ ಸೆಕ್ಷನ್ 6ರ ಪ್ರಕಾರ, ಅರ್ಜಿದಾರರು ಭಾರತೀಯ ಪ್ರಜೆಯಾಗಿಲ್ಲದಿದ್ದರೆ ಪಾಸ್‌ಪೋರ್ಟ್ ನೀಡಲು ನಿರಾಕರಿಸುವ ಅಧಿಕಾರ ಪಾಸ್‌ಪೋರ್ಟ್ ಅಧಿಕಾರಿಗಳಿಗಿದೆ. ಇದು ಪೌರತ್ವವು ಪಾಸ್‌ಪೋರ್ಟ್ ಪಡೆಯಲು ಪ್ರಮುಖ ಪೂರ್ವಾಪೇಕ್ಷಿತ ಎಂಬುದನ್ನು ಸೂಚಿಸುತ್ತದೆ.
ಭಾರತೀಯ ನಾಗರಿಕರು ಸ್ವಯಂಪ್ರೇರಣೆಯಿಂದ ಬೇರೆ ದೇಶದ ಪೌರತ್ವ ಪಡೆದರೆ, ಅವರ ಭಾರತೀಯ ಪೌರತ್ವ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಅಂತಹ ಸಂದರ್ಭದಲ್ಲಿ ಅವರು ಹೊಂದಿರುವ ಭಾರತೀಯ ಪಾಸ್‌ಪೋರ್ಟ್ ಅಮಾನ್ಯಗೊಳ್ಳುತ್ತದೆ ಹಾಗೂ ಅದನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಹಿಂದೆ ಸ್ಪಷ್ಟಪಡಿಸಿದಂತೆ, ಪಾಸ್‌ಪೋರ್ಟ್‌ಗಳು ಪ್ರಾಥಮಿಕವಾಗಿ ಅಂತರರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸಲು ಮತ್ತು ಭಾರತೀಯ ನಾಗರಿಕರ ನಿರ್ಗಮನವನ್ನು ನಿಯಂತ್ರಿಸಲು ಸರ್ಕಾರ ನೀಡುವ ದಾಖಲೆಗಳಾಗಿವೆ.
ಪೌರತ್ವ ದಾಖಲೆ ಚರ್ಚೆ ಮತ್ತು ಸರ್ಕಾರದ ಅಧಿಕೃತ ನಿಲುವು
ಭಾರತೀಯ ಪಾಸ್‌ಪೋರ್ಟ್ ಹೊಂದಲು ಭಾರತೀಯ ನಾಗರಿಕತ್ವ ಕಡ್ಡಾಯವಾಗಿದ್ದರೂ, ಕೇವಲ ಪಾಸ್‌ಪೋರ್ಟ್ ಹೊಂದಿರುವ ಮಾತ್ರಕ್ಕೆ ಅದು ವ್ಯಕ್ತಿಯ ಪೌರತ್ವಕ್ಕೆ ಸಂಪೂರ್ಣ ಮತ್ತು ಅಂತಿಮ ಸಾಕ್ಷಿಯಲ್ಲ ಎಂಬುದು ಸರ್ಕಾರದ ಅಧಿಕೃತ ನಿಲುವಾಗಿದೆ. ಇದು ಪೌರತ್ವದ ದಾಖಲೆಗಳ ಪರಿಶೀಲನೆಯ ಪ್ರಕ್ರಿಯೆಯಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
1967ರ ಪಾಸ್‌ಪೋರ್ಟ್ ಕಾಯ್ದೆಯನ್ವಯ ಸರಿಯಾದ ಪರಿಶೀಲನೆಯ ನಂತರ ಭಾರತೀಯ ನಾಗರಿಕರಿಗೆ ಮಾತ್ರ ಪಾಸ್‌ಪೋರ್ಟ್ ನೀಡಲಾಗುತ್ತದೆ.
ಭಾರತೀಯ ಸಂವಿಧಾನದ 9 ಮತ್ತು 11ನೇ ವಿಧಿಗಳು ಹಾಗೂ 1955ರ ಪೌರತ್ವ ಕಾಯ್ದೆಯ ಸೆಕ್ಷನ್ 9ರ ಪ್ರಕಾರ ಭಾರತದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲ.

