ಬೆಂಗಳೂರು: ಮಕ್ಕಳಿಗೆ ಒಂದನೇ ತರಗತಿ ಪ್ರವೇಶದ ವಯೋಮಿತಿ ಮಾನದಂಡ ಬದಲಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.
ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಮಾನದಂಡದಲ್ಲಿ 90 ದಿನ ಸಡಿಲಿಕೆ ನೀಡಬೇಕು. ಇಲ್ಲದಿದ್ದಲ್ಲಿ ರಾಜ್ಯದ 2.30 ಲಕ್ಷ ಮಕ್ಕಳ ಶೈಕ್ಷಣಿಕ ಹಿತಕ್ಕೆ ಮಾರಕವಾಗುತ್ತದೆ ಎಂದು ಯುಕೆಜಿ ಪೋಷಕರ ಒಕ್ಕೂಟದ ಧನುಷಾ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡ ಮಕ್ಕಳು ಒಂದನೇ ತರಗತಿ ಪ್ರವೇಶಕ್ಕೆ ಅರ್ಹರು ಎನ್ನುವ ನಿಯಮವಿದೆ. ಇದರಿಂದ ರಾಜ್ಯದ 2.30 ಲಕ್ಷ ಮಕ್ಕಳು ಒಂದನೇ ತರಗತಿ ಪ್ರವೇಶ ಪಡೆಯಲು ಸಾಧ್ಯವಾಗದೆ ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೀಗಾಗಿ ವಯೋಮಿತಿ ಮಾನದಂಡದಲ್ಲಿ 90 ದಿನ ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರ, ಕೇರಳ, ಒಡಿಶಾ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲಿ ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ ಮಾಡುತ್ತಿದ್ದು, ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

