ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಟವಾಡುವಾಗ ಅಚಾನಕ್ಕಾಗಿ ಸಂಭವಿಸಿದ ದುರಂತವೊಂದರಲ್ಲಿ 10 ವರ್ಷದ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಮನಕಲಕುವ ಘಟನೆ ವರದಿಯಾಗಿದೆ.
ಮನೆಯಲ್ಲಿ ಸೀರೆಯಿಂದ ಉಯ್ಯಾಲೆ ಕಟ್ಟಿ ಆಟವಾಡುತ್ತಿದ್ದ ಹತ್ತು ವರ್ಷದ ಬಾಲಕಿಯೊಬ್ಬಳು, ಅಕಸ್ಮಿಕವಾಗಿ ಸೀರೆ ಕುತ್ತಿಗೆಗೆ ಬಿಗಿದುಕೊಂಡು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹೆಬ್ಬಳ್ಳಿಯಲ್ಲಿ ಸಂಭವಿಸಿದೆ. ಪೋಷಕರು ಇಲ್ಲದ ಸಮಯದಲ್ಲಿ ಮೃತ್ಯು ಆಟದ ರೂಪದಲ್ಲಿ ಬಂದು ಪುಟ್ಟ ಕಂದಮ್ಮನನ್ನು ಬಲಿಪಡೆದಿದ್ದು, ಆಟವಾಡುತ್ತಿದ್ದ ಮಗು ಹೆಣವಾಗಿ ಬಿದ್ದಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಚಿಕ್ಕಮಗಳೂರು ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲೇಖನಾ (10) ಮೃತಪಟ್ಟ ಬಾಲಕಿ. ಬಾಲಕಿ ಮನೆಯಲ್ಲಿ ಆಟವಾಡುತ್ತಿದ್ದಾಗ, ನೇತುಹಾಕಿದ್ದ ಸೀರೆಯು ಆಕೆಯ ಕುತ್ತಿಗೆಗೆ ಅಕಸ್ಮಿಕವಾಗಿ ಬಿಗಿದುಕೊಂಡಿದೆ.
ದುರಂತ ಸಂಭವಿಸಿದ್ದು ಹೇಗೆ? : ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಲಕಿ ಸೀರೆಯಿಂದ ಉಯ್ಯಾಲೆ ಆಡುತ್ತಿದ್ದಳು ಅಥವಾ ಆ ಸೀರೆಯೊಂದಿಗೆ ಆಟವಾಡುತ್ತಿದ್ದಳು ಎನ್ನಲಾಗಿದೆ. ಈ ವೇಳೆ ಸೀರೆ ಕುತ್ತಿಗೆಗೆ ಸುತ್ತಿಕೊಂಡಿದ್ದರಿಂದ ಉಸಿರುಗಟ್ಟಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪೋಷಕರು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

