ಬೆಂಗಳೂರು: ಜೈಲಿನಲ್ಲಿ ನಟ ದರ್ಶನ್ ಆತ್ಮಹತ್ಯೆ ಯತ್ನ ವದಂತಿ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ದರ್ಶನ್ ಆತ್ಮಹತ್ಯೆ ಯತ್ನ ಎಂಬುದು ಕೇವಲ ವದಂತಿ. ಆ ವಿಚಾರ ನನ್ನ ಗಮನಕ್ಕೆ ಬಂದ ಬಳಿಕ ಅಧಿಕಾರಿಗಳಿಂದ ಮೌಖಿಕವಾಗಿ ಮಾಹಿತಿ ಕೇಳಿದ್ದೆ. ಆ ರೀತಿ ಯಾವುದೇ ಘಟನೆ ನಡೆದಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಹೊರತು ಇದರಲ್ಲಿ ಇನ್ನೇನೂ ವಿಚಾರ ಇಲ್ಲ ಎಂದು ತಿಳಿಸಿದ್ದಾರೆ.
ಟೌನ್‌ಹಾಲ್ ಬಳಿ ನಾಳೆ ನಡೆಯಬೇಕಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಬಹಿರಂಗ ಸಭೆಗೆ ಪೊಲೀಸ್ ಅನುಮತಿ ನಿರಾಕರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ಉದ್ದೇಶಕ್ಕೆ ಮಾಡ್ತಿದ್ದಾರೆ, ಒಂದು ಸಮಾವೇಶ ಮಾಡಿದಾಗ ಯಾರೆಲ್ಲ ಬರ್ತಾರೆ ಅಂತ ಪೊಲೀಸರು ಪರಿಶೀಲಿಸ್ತಾರೆ. ಪರಿಶೀಲಿಸಿ ಅನುಮತಿ ಕೊಡೋದು ಬಿಡೋದು ಪೊಲೀಸರಿಗೆ ಬಿಟ್ಟ ವಿಚಾರ. ಪೊಲೀಸರು ನಿರಾಕರಣೆ ಮಾಡಿದ್ದಾರೆ ಅಂದ್ರೆ ಏನಾದ್ರೂ ಅಂಶಗಳು ಇರಬೇಕಲ್ಲ ಎಂದರು.
ನಮ್ಮ ಪಕ್ಷ, ನಾಯಕರ ಬೆಂಬಲ ಬೇರೆ. ಪೊಲೀಸರ ಕೆಲಸ ಪೊಲೀಸರು ಮಾಡ್ತಾರೆ. ರಾಜಕಾರಣಿಗಳು ಮಾಡೋ ಕೆಲಸ ರಾಜಕಾರಣಿಗಳು ಮಾಡ್ತಾರೆ ಎಂದರು.
ಬಕ್ರೀದ್ ಕುರ್ಬಾನಿಗೆ ರಕ್ಷಣೆ ಕೋರಿ ವಕ್ಫ್ ಬೋರ್ಡ್ ಪತ್ರ ಬರೆದ ವಿಚಾರವಾಗಿ, ದೊಡ್ಡ ದೊಡ್ಡ ಹಬ್ಬಗಳಾದಾಗ ಪೊಲೀಸರು ಎಚ್ಚರಿಕೆ ವಹಿಸ್ತಾರೆ, ಅದು ರುಟೀನ್. ಹೆಚ್ಚುವರಿ ಎಚ್ಚರಿಕೆ ವಹಿಸಬೇಕು ಎಂದರೆ ಅದನ್ನೂ ಮಾಡ್ತಾರೆ. ವಕ್ಫ್ ಬೋರ್ಡ್ನವರಿಗೆ ಏನು ಆತಂಕ ಇದೆಯೋ ಗೊತ್ತಿಲ್ಲ. ಅವರು ಪತ್ರ ಬರೆದಿದ್ರೆ ಅದಕ್ಕೆ ಯಾವ ರೀತಿ ಸ್ಪಂದಿಸಬೇಕೋ ಅದರಂತೆ ಪೊಲೀಸರು ಸ್ಪಂದಿಸ್ತಾರೆ ಎಂದರು.

