ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಜೈಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಜೈಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೋಜು-ಮಸ್ತಿ, ರಾಜಾತಿಥ್ಯದ ಬಗ್ಗೆ ವೈರಲ್ ಆಗಿರುವ ವಿಡಿಯೋ, ಫೋಟೋಗಳನ್ನು ಪ್ರಾಜೆಕ್ಟರ್ ಗಳ ಮೂಲಕ ಪ್ರದರ್ಶಿಸಿರುವ ಗೃಹ ಸಚಿವರು ಜೈಲಾಧಿಕಾರಿಗಳನ್ನು ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಾರಾಗೃಹ ಕಾರಾಗೃಹದಂತೆ ಇಲ್ಲ. ಸಕಲ ಸೌಲಭ್ಯವನ್ನು ಅಪರಾಧಿಗಳಿಗೆ, ಕ್ರಿಮಿನಲ್ ಗಳಿಗೆ ಸಿಗುತ್ತಿದೆ. ಇದಕ್ಕೆಲ್ಲ ಅವಕಾಶ ನೀಡಿದವರು ಯಾರು? ಕೈದಿಗಳಿಗೆ ಮೊಬೈಲ್, ಫೋನ್, ಎಣ್ಣೆ, ಮೋಜು-ಮಸ್ತಿಗೆ ಅವಕಾಶ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ. ಈ ಫೋಟೋ, ವಿಡಿಯೋಗಳು ಯಾವಾಗಿನದ್ದು? ಎಂಬ ಬಗ್ಗೆಯೂ ಗೃಹ ಸಚಿವರು ಮಾಹಿತಿ ಕಲೆ ಹಾಕಿದ್ದಾರೆ.
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣ ಸಂಬಂಧ ಕೆಲ ಜೈಲಾಧಿಕಾರಿಗಳ ತಲೆದಂಡವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
