ತೆಲಂಗಾಣ : ರಸ್ತೆಯ ಬದಿಯಲ್ಲಿ ಪಾನಿಪುರಿ ತಿಂದ 15 ಮಂದಿ ಬಾಲಕಿಯರು ಅಸ್ವಸ್ಥಗೊಂಡಿರುವ ಘಟನೆ ಜೋಗುಲಾಂಬ ಗದ್ವಾಲ ಜಿಲ್ಲೆಯಲ್ಲಿ ನಡೆದಿದೆ.ಅಯಿಜಾ ಪಟ್ಟಣದ ಹಳೆಯ ಬಸ್ ನಿಲ್ದಾಣದ ಬಳಿ, ಸಾಯಂಕಾಲ ತಿಂಡಿ ತಿನ್ನಲು ಹೋದ ಸ್ನೇಹಿತೆಯರ ಗುಂಪು ರಸ್ತೆ ಬದಿಯ ಪಾನಿಪುರಿ ಬಂಡಿಯಲ್ಲಿ ಪಾನಿಪುರಿ ಸವಿದಿದ್ದಾರೆ.
ಪಾನಿಪುರಿ ತಿಂದ ಸ್ವಲ್ಪ ಸಮಯದ ನಂತರ, 15 ಮಂದಿ ಬಾಲಕಿಯರಿಗೆ ತೀವ್ರ ಹೊಟ್ಟೆನೋವು, ವಾಂತಿ ಮತ್ತು ಭೇದಿಯ ಸಮಸ್ಯೆ ಕಾಣಿಸಿಕೊಂಡಿದೆ.ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ನಂತರ ಬಾಲಕಿಯರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸದರಿ ಘಟನೆಗೆ ಕಾರಣಗಳೇನು?
ಆಹಾರ ಕಲಬೆರಕೆ ಹಾಗೂ ಕಲುಷಿತ ನೀರು ಮತ್ತು ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಿ ಪಾನಿಪುರಿ ತಯಾರಿಸಿರುವುದೇ ಈ ಅಸ್ವಸ್ಥತೆಗೆ ಕಾರಣ ಎಂದು ಪಾಲಕರು ಮತ್ತು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಪಾನಿಪುರಿ ಬಂಡಿಯನ್ನು ವಶಪಡಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.ಈ ಘಟನೆಯಿಂದ ಅಯಿಜಾ ಪಟ್ಟಣದಲ್ಲಿ ಆತಂಕ ಮನೆಮಾಡಿದೆ. ರಸ್ತೆ ಬದಿಯ ಫಾಸ್ಟ್ ಫುಡ್ ಮತ್ತು ಸ್ಟ್ರೀಟ್ ಫುಡ್ ಕೇಂದ್ರಗಳ ಮೇಲೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ, ಕಲುಷಿತ ಆಹಾರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

