ಬೆಂಗಳೂರು : 150 ಕನ್ನಡಿಗರನ್ನು ಹೊತ್ತ ವಿಮಾನ ಜಮ್ಮು- ಕಾಶ್ಮೀರದಿಂದ ಇಂದು ಬೆಂಗಳೂರಿಗೆ ಆಗಮಿಸಲಿದೆ.
ಕಾಶ್ಮೀರದ ವಿವಿಧ ಭಾಗಗಳಲ್ಲಿರುವ ಕರ್ನಾಟಕದ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಸಚಿವ ಸಂತೋಷ್ ಲಾಡ್ ನಿನ್ನೆ ಕಾಶ್ಮೀರಕ್ಕೆ ಆಗಮಿಸಿದ್ದರು.
ಕಾಶ್ಮೀರದಲ್ಲಿ ನಡೆದ ಈ ಭೀಭತ್ಸಕರ ದಾಳಿಯಲ್ಲಿ ಅಮಾನುಷವಾಗಿ ಹತ್ಯೆಯಾದ ಕುಟುಂಬಗಳ ನೋವು, ಸಂಕಟ ಯಾವ ಪಾಪಿಗೂ ಬೇಡ. ಇಂತಹ ಹಲವು ಸಂಕಟಗಳ ಆರ್ತನಾದಗಳಿಗೆ ಇವತ್ತು ಸಾಕ್ಷಿಯಾಗಿದ್ದೇನೆ. ಅವರಿಗೆ ಸಮಾಧಾನ ಹೇಳಬೇಕೋ? ಧೈರ್ಯ ತುಂಬಬೇಕೋ? ಅಸಲಿಗೆ ನಾನೇ ಭಾವುಕನಾಗಿದ್ದೆ! ಇವೆಲ್ಲವುದರ ನಡುವೆಯೂ ಸಾವಿಗೀಡಾದ ಮೂರೂ ಜನ ಕನ್ನಡಿಗರ ಮೃತದೇಹಗಳನ್ನು ಅವರ ಕುಟುಂಬಗಳ ಸಮೇತ ನಾಡಿಗೆ ರವಾನೆ ಮಾಡಲಾಗಿದೆ. ಅಲ್ಲಿ ಮುಂದಿನ ಕಾರ್ಯಗಳ ವ್ಯವಸ್ಥೆಯಾಗಲಿವೆ. ಕಾಶ್ಮೀರದ ವಿವಿಧ ಭಾಗಗಳಲ್ಲಿರುವ ಕರ್ನಾಟಕದ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಆದಷ್ಟು ಬೇಗ ಅವರನ್ನೆಲ್ಲ ಮರಳಿ ನಾಡಿಗೆ ರಾಜ್ಯ ಸರ್ಕಾರ ಕರೆತರಲಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ಪ್ರವಾಸಿಗರ ಪಾರ್ಥಿವ ಶರೀರ ಈಗಾಗಲೇ ಅವರ ಸ್ವಗೃಹಕ್ಕೆ ಆಗಮಿಸಿದೆ. ಕಾಶ್ಮೀರದ ವಿವಿಧೆಡೆ ಸಿಲುಕಿರುವ ರಾಜ್ಯದ ಪ್ರವಾಸಿಗರನ್ನು ಸಹ ಮರಳಿ ನಾಡಿಗೆ ಕರೆತರುವ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರದ ವತಿಯಿಂದ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.