ವಾರಾಣಸಿಯ ಪ್ರಸಿದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 85 ವರ್ಷ ವಯಸ್ಸಿನ ಹಿರಿಯ ಹೃದ್ರೋಗ ತಜ್ಞ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಟಿ.ಕೆ. ಲಾಹಿರಿ ಅವರ ಮೇಲೆ ಅದೇ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರೊಬ್ಬರು ದೌರ್ಜನ್ಯ ಎಸಗಿ, ಕೆನ್ನೆಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲೇ (ಐಸಿಯು) ಈ ಘಟನೆ ಸಂಭವಿಸಿದ್ದು, ಹಲ್ಲೆಯಿಂದಾಗಿ ಡಾ. ಲಾಹಿರಿ ಅವರ ಕಣ್ಣು ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿವೆ. ಹೃದ್ರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅರವಿಂದ್ ಪಾಂಡೆ ಎಂಬುವವರೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಗಾಯಗೊಂಡಿರುವ ಡಾ. ಲಾಹಿರಿ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಡಾ. ಲಾಹಿರಿ ಅವರ ಕುಟುಂಬಸ್ಥರು ಬಿಎಚ್‌ಯು ಉಪಕುಲಪತಿ, ಐಎಂಎಸ್-ಬಿಎಚ್‌ಯು ನಿರ್ದೇಶಕರು ಹಾಗೂ ವೈದ್ಯಕೀಯ ಸೂಪರಿಂಟೆಂಡೆಂಟ್ ಅವರಿಗೆ ಇಮೇಲ್ ಮೂಲಕ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ತನಿಖೆಗೆ ಮುಂದಾಗಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು, ಪರಿಸ್ಥಿತಿ ಪರಿಶೀಲನೆಗೆ ವಿಶೇಷ ವೈದ್ಯಕೀಯ ಮಂಡಳಿಯನ್ನು ರಚಿಸಿದೆ. ಹಿರಿಯ ಅಧಿಕಾರಿಗಳು ಐಸಿಯುಗೆ ಭೇಟಿ ನೀಡಿ ಡಾ. ಲಾಹಿರಿ ಅವರ ಆರೋಗ್ಯ ವಿಚಾರಿಸಿದ್ದಾರೆ.
1941 ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದ ಡಾ. ಟಿ.ಕೆ. ಲಾಹಿರಿ ಅವರು 2003 ರಲ್ಲೇ ಸೇವೆಯಿಂದ ನಿವೃತ್ತರಾಗಿದ್ದರೂ, ರೋಗಿಗಳ ಸೇವೆಯನ್ನು ನಿಲ್ಲಿಸಿರಲಿಲ್ಲ. ನಿವೃತ್ತಿಯ ನಂತರವೂ ನಡೆದುಕೊಂಡೇ ಆಸ್ಪತ್ರೆಗೆ ಬಂದು ಉಚಿತವಾಗಿ ರೋಗಿಗಳನ್ನು ತಪಾಸಣೆ ಮಾಡುತ್ತಿದ್ದರು. ಇವರ ಈ ನಿಸ್ಸ್ವಾರ್ಥ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ 2006 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ತಮ್ಮ ಪಿಂಚಣಿ ಹಣದ ಬಹುಭಾಗವನ್ನು ಸಮಾಜಸೇವೆಗೆ ನೀಡುವ ಇಂತಹ ಸರಳ ಹಾಗೂ ಹಿರಿಯ ವೈದ್ಯರ ಮೇಲಿನ ಹಲ್ಲೆ ಪ್ರಸಂಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

