ಬೆಂಗಳೂರು : ಕೇಂದ್ರ ಸರ್ಕಾರಕ್ಕಿಂತ ನಮ್ಮ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ “ಕೇಂದ್ರ ಸರ್ಕಾರಕ್ಕಿಂತ ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿದೆ”ವಿಜಯೇಂದ್ರ ಅವರೇ, ಕರ್ನಾಟಕದ ಆರ್ಥಿಕ ಸ್ಥಿತಿ ನಿಮ್ಮ ಪಕ್ಷದ ಆಡಳಿತ ಇರುವ ಕೇಂದ್ರ ಸರ್ಕಾರಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಈ ವರ್ಷದ ನಮ್ಮ ಬಜೆಟ್ ಗಾತ್ರ ರೂ.4,48,004 ಕೋಟಿಗಳಾಗಿದ್ದು, ಇದು ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ 38,455 ಕೋಟಿ ರೂ. ಗಳಷ್ಟು ಹೆಚ್ಚಿನದ್ದಾಗಿದೆ ಎಂದರು.
ನಮ್ಮ ಬಜೆಟ್ ಗಾತ್ರದಲ್ಲಿ ಶೇ.9.4ರಷ್ಟು ಬೆಳವಣಿಗೆಯಾಗಿದ್ದರೆ, ಕೇಂದ್ರ ಸರ್ಕಾರದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.6ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷ ₹50.66 ಲಕ್ಷ ಕೋಟಿಗಳ ಬಜೆಟ್ ಮಂಡಿಸಿದ್ದ ಕೇಂದ್ರ ಸರ್ಕಾರ ಈ ವರ್ಷ 53.47 ಲಕ್ಷ ಕೋಟಿ ರೂ.ಗಾತ್ರದ ಬಜೆಟ್ ಮಂಡಿಸಿದ್ದಾರೆ. ನಮ್ಮ ಬಜೆಟ್ ಗಾತ್ರ ಆರ್ಥಿಕ ಪ್ರಗತಿಯನ್ನು ಸೂಚಿಸುತ್ತಿದೆ. ಆರ್ಥಿಕ ಹಿಂಜರಿತ ಇದ್ದಿದ್ದರೆ ಈ ಪ್ರಗತಿ ಸಾಧ್ಯವಾಗುತ್ತಿತ್ತೇ? ಎಂದು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
“ನಮ್ಮ ಆಯವ್ಯಯವೇ ನಮ್ಮ ಶ್ವೇತಪತ್ರ
ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿರುವುದು ಆರ್ಥಿಕ ಕ್ಷೇತ್ರದ ಬಗೆಗಿನ ಅವರ ಅಜ್ಞಾನ, ಆಡಳಿತದ ಅನುಭವದ ಕೊರತೆ ಮತ್ತು ರಾಜಕೀಯ ಹತಾಶೆಯನ್ನು ತೋರಿಸುತ್ತದೆ.ಕಳೆದ ತಿಂಗಳಷ್ಟೇ ಈ ಆರ್ಥಿಕ ವರ್ಷದ ಆಯವ್ಯಯಪತ್ರವನ್ನು ನಾನು ಮಂಡಿಸಿದ್ದೇನೆ, ಅದು ಅಂಕಿ-ಅಂಶಗಳ ಕಾಗದದ ಕಂತೆ ಅಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಒಪ್ಪಿಸಿರುವ ಪ್ರಾಮಾಣಿಕ ಲೆಕ್ಕಪತ್ರ. ಆ ಆಯವ್ಯಯವನ್ನು ವಿಧಾನಮಂಡಲದ ಉಭಯ ಸದನಗಳು ಒಪ್ಪಿಕೊಂಡು ಅಂಗೀಕರಿಸಿವೆ. ಇದೇ ನಮ್ಮ ಶ್ವೇತಪತ್ರ. ಎಂದು ಸಿಎಂ ಹೇಳಿದ್ದಾರೆ.

