ಬೆಂಗಳೂರು: ರಾಜ್ಯದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಕಡ್ಡಾಯವಾಗಿ 7 ಗಂಟೆ ಬೋಧನೆ ಮಾಡಬೇಕೆಂಬ ಶಾಲಾ ಶಿಕ್ಷಣ ಇಲಾಖೆ ಆದೇಶಕ್ಕೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ಅಥವಾ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೋಧನೆ ಮಾಡಬೇಕೆಂಬ ನಿಯಮ ಕೈಬಿಡಬೇಕೆಂದು ಒತಾಯಿಸಲಾಗಿದೆ. 2026 -27ನೇ ಸಾಲಿನ ಶಿಕ್ಷಣ ಇಲಾಖೆ ಮಾರ್ಗಸೂಚಿ ಕರಡು ಪ್ರತಿಯಲ್ಲಿ ಉಪನ್ಯಾಸಕರ ಬೋಧನಾ ಅವಧಿಯನ್ನು ಐದರಿಂದ ಆರು ಗಂಟೆ ಕಾಲ ವಿಸ್ತರಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪಿಯು ಉಪನ್ಯಾಸಕರ ಸಂಘ ಮನವಿ ಸಲ್ಲಿಸಿದ್ದು, ಈ ನಿಯಮ ಪುನರ್ ಪರಿಶೀಲಿಸುವಂತೆ ಕೋರಿದೆ.
ಬಹುತೇಕ ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳು ಗ್ರಾಮೀಣ ಭಾಗದಲ್ಲಿವೆ. ಸಾರಿಗೆ ಸಂಪರ್ಕ ಉತ್ತಮವಾಗಿಲ್ಲ. ವಿದ್ಯಾರ್ಥಿಗಳ ಸಾಮಾಜಿಕ ಹಿನ್ನೆಲೆ ಭಿನ್ನವಾಗಿರುವುದರಿಂದ ಸತತ ಏಳು ಗಂಟೆ ತರಗತಿಗಳಲ್ಲಿ ಕಳೆಯುವುದು ಕಷ್ಟವೆಂದು ಹೇಳಲಾಗಿದೆ.
ಉಪನ್ಯಾಸಕರ ಬೋಧನಾ ಅವಧಿ ವಿಸ್ತರಿಸಲು ತಜ್ಞವೈದ್ಯರು, ಮಾನಸಿಕ ತಜ್ಞರು, ಶಿಕ್ಷಣ ತಜ್ಞರು, ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಮತ್ತು ಸಂಘಟನೆಯ ಪದಾಧಿಕಾರಿಗಳನ್ನು ಒಳಗೊಂಡಂತೆ ಸಮಿತಿ ರಚಿಸಿ ವರದಿ ಪಡೆಯಬೇಕು, ಸಮಿತಿಯ ವರದಿ ಬರುವವರೆಗೆ ಪ್ರಸ್ತುತ ಇರುವ 5 ಗಂಟೆ ಬೋಧನಾ ಅವಧಿ ಮುಂದುವರೆಸಬೇಕೆಂದು ಒತ್ತಾಯಿಸಲಾಗಿದೆ.

