ಬೆಂಗಳೂರು: ಉಪ ಲೋಕಾಯುಕ್ತರಿಗೆ ಆನ್ಲೈನ್ ಕಂಪನಿ ವಂಚಿಸಿದೆ. ಬ್ಲೇಡ್ ಬದಲು ಹಳೆಯ ಬಟ್ಟೆ ಪೂರೈಕೆ ಮಾಡಿದ್ದು, ಈ ಬಗ್ಗೆ ಕೇಂದ್ರ ವಿಭಾಗದ ಸೆನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನ್ಲೈನ್ ಮೂಲಕ ರೇಜರ್ ಬ್ಲೇಡ್ ಬುಕ್ ಮಾಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿಗೆ ರೇಜರ್ ಬ್ಲೇಡ್ ಬದಲು ಹಳೆಯ ಬಟ್ಟೆ ಕೊಟ್ಟು ವಂಚಿಸಲಾಗಿದೆ. ಫೆಬ್ರವರಿ 4ರಂದು ಫಣೀಂದ್ರ ಅವರು ಗುಡ್ ಮ್ಯಾಕ್ ಕಂಪನಿಯ ವೆಬ್ಸೈಟ್ ಮೂಲಕ ಪುರುಷರ ರೇಜರ್ ಬ್ಲೇಡ್ ಅನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿದ್ದರು. ಫೆಬ್ರವರಿ 9ರಂದು ಶ್ಯಾಡೋಫಾಕ್ಸ್ ಸರ್ಫೇಸ್ ಲಾಜಿಸ್ಟಿಕ್ಸ್ ಸಂಸ್ಥೆಯ ಪ್ರತಿನಿಧಿ ವಿಜಯ್ ಎಂಬಾತ ಫಣೀಂದ್ರ ಅವರಿಗೆ ಕರೆ ಮಾಡಿ ಆರ್ಡರ್ ಮಾಡಿದ ವಸ್ತು ಬಂದಿರುವುದಾಗಿ ತಿಳಿಸಿ ವಿತರಣೆಗೆ ಸಂಬಂಧಿಸಿದ ದೃಢೀಕರಣ ಕೇಳಿದ್ದಾನೆ.
ಫಣೀಂದ್ರ ಅವರು ಕಚೇರಿಯಲ್ಲಿ ಇದ್ದ ಕಾರಣ ಪಾರ್ಸೆಲ್ ಅನ್ನು ಅವರ ಮನೆಯ ವಿಳಾಸಕ್ಕೆ ತಲುಪಿಸಲು ತಿಳಿಸಿದ್ದಾರೆ. ವಸ್ತು ತಲುಪಿಸಿ 699 ರೂ. ಪಡೆದು ವಿಜಯ್ ತೆರಳಿದ್ದಾನೆ. ಸಂಜೆ ಮನೆಗೆ ಬಂದ ಫಣೀಂದ್ರ ಪಾರ್ಸೆಲ್ ತೆಗೆದು ನೋಡಿದಾಗ ಆರ್ಡರ್ ಮಾಡಿದ ರೇಜರ್ ಬ್ಲೇಡ್ ಬದಲು ಹಳೆ ಬಟ್ಟೆಗಳು ಇರುವುದು ಕಂಡುಬಂದಿವೆ. ತಕ್ಷಣವೇ ವಸ್ತುಗಳನ್ನು ವಿತರಿಸಿದ ವಿಜಯ್ ನನ್ನು ಸಂಪರ್ಕಿಸಿದಾಗ ಪಾರ್ಸೆಲ್ ಒಳಗಿನ ವಸ್ತುಗಳಿಗೂ ನಮಗೂ ಸಂಬಂಧವಿಲ್ಲವೆಂದು ಹೇಳಿ ಸಂಬಂಧಿತ ಕಂಪನಿಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾನೆ.
ಆರ್ಡರ್ ಮಾಡಿದ ವಸ್ತುವಿನ ಬದಲಿಗೆ ಬೇರೆ ಬಟ್ಟೆ ನೀಡಿ ಮೋಸ ಮಾಡಿರುವ ಗುಡ್ ಮ್ಯಾಕ್ಸ್ ಕಂಪನಿ ಮತ್ತು ಆ ವಸ್ತು ವಿತರಿಸಿರುವ ಶ್ಯಾಡೋಫ್ಯಾಕ್ಸ್ ಸರ್ಫೇಸ್ ಲಾಜಿಸ್ಟಿಕ್ಸ್ ಸಂಸ್ಥೆ ವಿರುದ್ಧ ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಉಪ ಲೋಕಾಯುಕ್ತರು ದೂರು ನೀಡಿದ್ದು, ಬೆಂಗಳೂರಿನ ಕೇಂದ್ರ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

